ಶಿವಮೊಗ್ಗ:ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತಿದ್ದ ಯುವಕನೋರ್ವ ನವಣೆ ಕಾಳುಗಳನ್ನು ಎಣಿಸಿ ಸಾಧನೆ ಮಾಡಿದ್ದು, ಇದೀಗ ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ್ದಾನೆ. ಮನೆಗೆ ತಂದ ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಎಂದು ಎಣಿಸಿ ಈತ ಸಾಧನೆ ಮಾಡಿದ್ದಾನೆ.
ಶಿವಮೊಗ್ಗದ ಗಾಂಧಿ ಬಜಾರ್ನ ಅಶೋಕ್ ರಸ್ತೆ ನಿವಾಸಿಯಾಗಿರುವ ಅಭಿಷೇಕ್, ಬ್ರಹ್ಮಾವರದ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನಲ್ಲಿ ಬಿಬಿಎ, ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ತಂತ್ರಜ್ಞಾನ ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ 2ನೇ ಅಲೆಯ ಲಾಕ್ಡೌನ್ ಆಗುತ್ತಿದ್ದಂತೆ ಮನೆಗೆ ಬಂದ ಅಭಿಷೇಕ್ ಅಲ್ಲಿಯೇ ಲಾಕ್ ಆಗಿದ್ದಾನೆ. ಈ ವೇಳೆ ಮನೆಯಲ್ಲೇ ಕುಳಿತು ಒಂದು ಕೆಜಿ ನವಣೆಯಲ್ಲಿ 4,04,882 ಕಾಳುಗಳನ್ನು ಎಣಿಸಿ, 500ಕ್ಕೆ ಒಂದರಂತೆ ಪ್ಯಾಕ್ ಮಾಡಿ, ಇಂಡಿಯಾ ವರ್ಲ್ಡ್ ರೆಕಾರ್ಡ್ಗೆ ಭಾಜನರಾಗಿದ್ದಾರೆ.
ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ ಅಭಿಷೇಕ್ ಒಂದು ಕೆಜಿ ನವಣೆಯಲ್ಲಿ 4,04,882 ಕಾಳುಗಳನ್ನು ಎಣಿಸಲು 87 ಗಂಟೆ 35 ನಿಮಿಷ ತೆಗೆದುಕೊಂಡಿದ್ದು, ಇದನ್ನು ಐಡಬ್ಲ್ಯೂಆರ್ ಫೌಂಡೇಶನ್ನವರು, ವಿಡಿಯೋ ಕಾಲ್ ಮಾಡಿ ಪರೀಕ್ಷೆ ಕೂಡ ಮಾಡಿದ್ದಾರಂತೆ. ಸಾಮಾನ್ಯವಾಗಿ, ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋದಿಲ್ಲ. ಆದರೆ, ಈ ಕೆಲಸವನ್ನು ಅಭಿಷೇಕ್ ಮಾಡಿ ತೋರಿಸಿದ್ದಾರೆ.
ಪ್ರತಿ ಪ್ಯಾಕೇಟ್ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ಮತ್ತು ಹೆಚ್ಚು ತೂಕವಿಲ್ಲದ ನವಣೆ ಕಾಳುಗಳನ್ನು ಕೂಡ ಹೆಚ್ಚು ಕಡಿಮೆಯಾಗದಂತೆ ಎಣಿಸಿರುವುದು ವಿಶೇಷವಾಗಿದೆ. ಅತಿ ಕ್ಲಿಷ್ಟಕರವಾದ ಮತ್ತು ವಿಭಿನ್ನ ಪ್ರಯತ್ನದಲ್ಲಿ ಅಭಿಷೇಕ್ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಇವರಿಗೆ ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪದಕ, ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಲಭಿಸಿದ್ದು, ಅಭಿಷೇಕ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಪಕ್ಷಿಗಳಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಈ ನವಣೆ ಕಾಳುಗಳ ಅಗತ್ಯತೆ ಹೆಚ್ಚಿದ್ದು, ಅಭಿಷೇಕ್ ಮನೆಯಲ್ಲಿಯೂ ಉಪಹಾರಕ್ಕಾಗಿ ಈ ನವಣೆ ಕಾಳುಗಳನ್ನು ಬಳಸುತ್ತಾರಂತೆ. ಸಾಧನೆಗೆ ಇದೇ ಕಾಳನ್ನು ಬಳಸಿಕೊಂಡಿದ್ದು ಅಭಿಷೇಕ್ ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.