ಶಿವಮೊಗ್ಗ: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರ ಕೇವಲ 500 ಕೋಟಿ ರೂ ನೀಡಿ ದೇಶದ ರೈತರನ್ನು ವಂಚಿಸುತ್ತಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಕೇಂದ್ರ ನೀಡಿರುವ ಬೆಂಬಲ ಭಿಕ್ಷೆಯಂತಿದೆ: ಬಸವರಾಜಪ್ಪ ಟೀಕೆ ಕೇಂದ್ರ ಸರ್ಕಾರ ಭತ್ತ, ರಾಗಿ, ಹೈಬ್ರಿಡ್ ಜೋಳ, ಸಜ್ಜೆ, ತೊಗರಿ, ಹೆಸರು ಕಾಳು, ಉದ್ದಿನ ಕಾಳು, ಕಡಲೆ ಕಾಳು, ಶೇಂಗಾ, ಸೋಯಾಬಿನ್, ಸೂರ್ಯಕಾಂತಿ ಸೇರಿದಂತೆ 17 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಕೇಂದ್ರವು ಶೇ 80 ರಿಂದ 85 ರಷ್ಟು ಬೆಲೆ ಜಾಸ್ತಿ ಮಾಡಲಾಗಿದೆ ಎಂದು ಹೇಳಿದೆ. ಆದರೆ ಕೇಂದ್ರ ಹೇಳುತ್ತಿರುವುದು ಶುದ್ದ ಸುಳ್ಳು ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಕೇವಲ ಕೇವಲ ಶೇ 3 ರಷ್ಟು ಮಾತ್ರ ಏರಿಕೆ ಮಾಡಿದೆ. ಇದರಲ್ಲಿ ಕೇಂದ್ರದ ಬಂಪರ್ ಕೊಡುಗೆ ಏನೂ ಇಲ್ಲ ಎಂದರು. ಕೇಂದ್ರ ಸರ್ಕಾರ ರೈತನ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಯನ್ನು ಘೋಷಣೆ ಮಾಡಿದೆ. 2017 ರ ಅಂಕಿ-ಅಂಶದ ಪ್ರಕಾರ ಸ್ವಾಮಿನಾಥನ್ ವರದಿಯಂತೆ ವರ್ಷಕ್ಕೆ 21.469 ಕೋಟಿ ರೂ ಲೂಟಿ ಮಾಡಲಾಗಿದೆ. ಈಗ ಕೇವಲ 500 ಕೋಟಿಯನ್ನು ಭಿಕ್ಷೆ ನೀಡಿದಂತೆ ನೀಡಿದೆ. ಕೊರೊನಾ ಲಾಕ್‌ಡೌನ್‌ನಿಂದ ಮಾರುಕಟ್ಟೆ ಲಭ್ಯವಾಗದೆ ರೈತ ತನ್ನ ಬೆಳೆಯನ್ನು ಮಣ್ಣುಪಾಲು ಮಾಡಿದ್ದಾನೆ. ಇದಕ್ಕೆ ಯಾವುದೇ ಬೆಲೆ ನೀಡಿಲ್ಲ ಎಂದರು.
ಕೇಂದ್ರ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿಯೇ ಎಪಿಎಂಸಿ ಕಾಯ್ದೆ, ವಿದ್ಯುತ್, ಕಾರ್ಮಿಕ ಸೇರಿದಂತೆ ದೇಶದ ಜನತೆಯ ಮಾರಕ ಕಾಯಿದೆಗಳನ್ನು ಜಾರಿಗೆ ತರುತ್ತಿದೆ. ಈ ವೇಳೆಯಲ್ಲಿ ಯಾರು ಸಹ ಧರಣಿ, ಪ್ರತಿಭಟನೆ ನಡೆಸುವಂತಿಲ್ಲ ಎಂಬುದನ್ನೆ ಬಳಸಿಕೊಂಡು ಕಾಯ್ದೆ ಜಾರಿಗೆ ತರುತ್ತಿರುವುದು ಖಂಡನೀಯ ಎಂದು ಬಸವರಾಜಪ್ಪ ಆರೋಪಿಸಿದ್ದಾರೆ.