ಶಿವಮೊಗ್ಗ:ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಮನೆ,ಜಮೀನು,ಬೆಳೆ ಕಳೆದುಕೊಂಡು ಜನರು ಕಂಗಲಾಗಿದ್ದಾರೆ.
ಸಂತ್ರಸ್ತರ ಸ್ಥಿತಿ ಯಾರಿಗೂ ಬೇಡ.. ಜಮೀನುಗಳಿಗೆ ನುಗ್ಗಿದ ಮಳೆ ನೀರು:
ಜಿಲ್ಲೆಯ ಸಾಗರ ತಾಲೂಕಿನ ನಂದೋಡಿ ಗ್ರಾಮದಲ್ಲಿ ಸುರಿದ ಭೀಕರ ಮಳೆಯಿಂದಾಗಿ ತೋಟಕ್ಕೆ ನೀರು ನುಗ್ಗಿ ಅಡಿಕೆ ಮರಗಳೆಲ್ಲ ನೆಲಸಮವಾಗಿವೆ. ದೇವಕಮ್ಮ ಎಂಬುವರಿಗೆ ಸೇರಿದ್ದ ಜಮೀನು ಇದಾಗಿದ್ದು, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೋಟದ ಪಕ್ಕದಲ್ಲಿರುವ ಗುಡ್ಡ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಈ ಕುರಿತು ಸರ್ಕಾರ ಸರಿಯಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತುಂಗಾ ಸೇತುವೆ ಬಳಿ ಬಿರುಕು:
ಶಿವಮೊಗ್ಗ ನಗರದ ಕಡೆಯಿಂದ ಹೋಗುವ ಬೆಕ್ಕಿನ ಕಲ್ಮಠದ ಬಳಿಯ ಸೇತುವೆಯ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಹಾಗಾಗಿ ಸೇತುವೆಯ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಜಾನುವಾರುಗಳು ಸಾವು:
ಜಿಲ್ಲೆಯ ಸಾಗರದ ಮರಸದ ಗ್ರಾಮದಲ್ಲಿ ಕೊಟ್ಟಿಗೆ ಬಿದ್ದು ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಸಾಗರ ತಾಲೂಕು ಮರಸದ ಗ್ರಾಮದ ಮಂಜಮ್ಮ ಕೇಶವ ಎಂಬುವರ ಮನೆ ಪಕ್ಕದಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಲಾಗಿತ್ತು. ಮಳೆಗೆ ಕೊಟ್ಟಿಗೆ ಕುಸಿದು ಬಿದ್ದಿದೆ. ಈ ವೇಳೆ ಸ್ಥಳೀಯರು ಕೆಲ ಜಾನುವಾರುಗಳನ್ನು ಹೊರ ತಂದಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 10 ಜಾನುವಾರುಗಳು ಮೃತಪಟ್ಟಿದ್ದು, 404 ಮನೆಗಳಿಗೆ ಭಾಗಶಃ ಹಾನಿಯುಂಟಾಗಿವೆ.
14 ನೆರೆ ಪರಿಹಾರ ಕೇಂದ್ರ ಆರಂಭ:
ಜಿಲ್ಲೆಯ ಹಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿದ್ದು, ಈವರೆಗೆ ಒಟ್ಟು 14 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಹಾರ ಕೇಂದ್ರ ವಿವರ:
ಶಿವಮೊಗ್ಗ ನಗರದ ಇಮಾಮ್ ಬಾಡ, ಸೀಗೆಹಟ್ಟಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗುಡ್ಡೇಕಲ್, ಪುಟ್ಟಪ್ಪ ಕ್ಯಾಂಪ್, ಟ್ಯಾಂಕ್ ಮೊಹಲ್ಲ ಮತ್ತು ವಿದ್ಯಾನಗರ, ಭದ್ರಾವತಿ ತಾಲೂಕಿನ ಕವಲಗುಂದಿ, ತೀರ್ಥಹಳ್ಳಿಯ ರಾಮೇಶ್ವರ ಸಭಾಭವನ, ಸೊರಬದ ಹಿರೇಕಾಂಶಿ ಗ್ರಾಮ, ಶಕುನವಳ್ಳಿ, ಜಡೆ, ಹಣಜಿ, ಮಲ್ಲಾಪುರ ಗ್ರಾಮ ಹಾಗೂ ಮೂಡಿಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ ಊಟ, ಉಪಾಹಾರ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಜಮೀನು:
ಜಿಲ್ಲೆಯಲ್ಲಿ ಒಟ್ಟು 7692 ಹೆಕ್ಟೇರ್ ಕೃಷಿ ಭೂಮಿ ಹಾಗೂ 1106 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಸೇರಿ ಒಟ್ಟು 8798 ಹೆಕ್ಟೇರ್ ಭೂಮಿ ಜಲಾವೃತವಾಗಿದೆ. ತಾಲೂಕುವಾರುವಾಗಿ ನೋಡಿದರೆ ಶಿವಮೊಗ್ಗ 361 ಹೆ., ಭದ್ರಾವತಿ 109ಹೆ, ತೀರ್ಥಹಳ್ಳಿ 430 ಹೆ, ಸಾಗರ 2935 ಹೆ, ಹೊಸನಗರ 532 ಹೆ, ಶಿಕಾರಿಪುರ 237 ಹೆ ಹಾಗೂ ಸೊರಬ ತಾಲೂಕಿನಲ್ಲಿ 4194 ಹೆಕ್ಟೇರ್ ಭೂಮಿ ಜಲಾವೃತವಾಗಿವೆ.
ಬಂದ್ ಆಗಿರುವ ರಸ್ತೆಗಳ ವಿವರ:
ಹೊಸನಗರ ತಾಲೂಕಿನಲ್ಲಿ ಭೂ ಕುಸಿತದಿಂದಾಗಿ ಎರಡು ರಸ್ತೆಗಳು ಹಾನಿಯಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಕಾರಣಗಿರಿ ಗಣಪತಿ ದೇವಸ್ಥಾನದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು-ರಾಣೆಬೆನ್ನೂರು ರಸ್ತೆ ಮಾರ್ಗ ಸಂಚಾರ ನಿರ್ಬಂಧಿಸಿ, ಶಿವಮೊಗ್ಗ ಕಡೆಯಿಂದ ಬರುವ ಭಾರಿ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ ಮಾರ್ಗವಾಗಿ ಸಂಚರಿಸಬಹುದಾಗಿದೆ. ಇದೇ ರೀತಿ ನಾಗೋಡು ಗ್ರಾಮ ರಾಷ್ಟ್ರೀಯ ಹೆದ್ದಾರಿ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ನಗರ-ಹುಲಿಕಲ್‍ಘಾಟ್-ಹೊಸಂಗಡಿ-ಸಿದ್ದಾಪುರ ಮುಖಾಂತರ ಸಂಚರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸೂಚನೆ:
ನದಿಪಾತ್ರಗಳಲ್ಲಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಹಳೆಯ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವವರು ಸುರಕ್ಷತೆ ದೃಷ್ಟಿಯಿಂದ ಮನೆ ತೆರವುಗೊಳಿಸಬೇಕು. ತುರ್ತು ಪರಿಹಾರ ಕಾರ್ಯಗಳಿಗೆ ಪ್ರತಿ ತಾಲೂಕಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಾಲೆ ಪ್ರಾರಂಭ ಮಾಡುವ ಪೂರ್ವದಲ್ಲಿ ಶಾಲಾ ಸುಸ್ಥಿತಿಯನ್ನು ಖಾತ್ರಿಪಡಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.