ಶಿವಮೊಗ್ಗ: ಸಾಗರದ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಹೋರಾಟ ಸಮಿತಿ ವತಿಯಿಂದ ರೈತರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಸಾಗರ ತಾಲೂಕು ಬರೂರು ಗ್ರಾಮದ ಹೊರ ವಲಯದಿಂದ ರೈತರು ಪ್ರತಿಭಟನೆ ಮೆರವಣಿಗೆ ಹೊರಟು ಗ್ರಾಮ ಪಂಚಾಯತ್‌ವರೆಗೂ ಮೆರವಣಿಗೆ ನಡೆಸಿದರು. ಬಳಿಕ ಗ್ರಾಮ ಪಂಚಾಯತ್ ಪಿಡಿಒರವರಿಗೆ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ.. ಕಲ್ಲೊಡ್ಡು ಹಳ್ಳ ಹೊಸಕೆರೆ ಯೋಜನೆಗೆ ಈಗಾಗಲೇ ಸರ್ಕಾರ ಆಡಳಿತಾತ್ಮಕವಾಗಿ ಅನುಮೋದನೆ ನೀಡಿದ್ದು, ಈ ಯೋಜನೆಯಿಂದ ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಲ್ಲುಕೊಪ್ಪ, ಗುತ್ತೆನಹಳ್ಳಿ, ಪರಸಿಕೊಪ್ಪ, ತೆಪ್ಪಗೋಡು, ಕೊರಲಕೊಪ್ಪ, ಮಡಿವಾಳನಕಟ್ಟೆ, ಮುತ್ತಲಬೈಲು,ಮಿಡಿನಾಗರ, ಕುಂದೂರು, ಬಸವನ ಕಲ್ಯಾಣ ಗ್ರಾಮಗಳು ಅತಂತ್ರವಾಗಿವೆ. ಇದರಿಂದ 15 ಸಾವಿರ ಕುಟುಂಬಗಳು ನೆಲೆ ಕಳೆದುಕೊಳ್ಳುತ್ತವೆ ಎಂದು ದೂರಿದರು.
ಈಗಾಗಲೇ ಮಡೆನೂರು ಮತ್ತು ಲಿಂಗನಮಕ್ಕಿ ಅಣೆಕಟ್ಟೆಗಳಿಂದ ಮುಳುಗಡೆಯಾದವರು ಇಲ್ಲಿ ಬಂದು ನೆಲೆಸಿದ್ದು, ಈಗ ಮತ್ತೆ ಕಲ್ಲೊಡ್ಡು ಯೋಜನೆಯಿಂದ ನಮ್ಮನ್ನು ಅತಂತ್ರರನ್ನಾಗಿ ಮಾಡುವುದು ಎಷ್ಟು ಸರಿ. ಈ ನೀರಾವರಿ ಯೋಜನೆಯಿಂದ ಸಾಗರ ತಾಲೂಕಿಗೆ ಯಾವುದೇ ಅನುಕೂಲವಿಲ್ಲ. ಇದು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಗಳಿಗೆ ಮಾತ್ರ ಅನುಕೂಲವಾಗಲಿದೆ. ಕಲ್ಲೊಡ್ಡು ಯೋಜನೆಯು ಅವೈಜ್ಞಾನಿಕವಾಗಿದೆ. ಇದರಿಂದ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ರೈತರು, ಗ್ರಾಮಸ್ಥರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.