ಕರ್ನಾಟಕ

karnataka

ETV Bharat / state

ಬರೋಬ್ಬರಿ 60 ವರ್ಷದ ಬಳಿಕ ವಿದ್ಯುತ್ ಸೌಲಭ್ಯ; ಶೆಟ್ಟಿಹಳ್ಳಿ- ಚಿತ್ರಶೆಟ್ಟಿಹಳ್ಳಿಗೆ ಹೊಸ ಬೆಳಕು​

ಶಿವಮೊಗ್ಗದ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಸ್ಥರ ದಶಕಗಳ ಹೋರಾಟದ ಫಲವಾಗಿ ಇಂದು ಇಲ್ಲಿನ ಪ್ರತಿ ಮನೆಗಳಿಗೆ ಸರ್ಕಾರದಿಂದ ವಿದ್ಯುತ್​ ಸೌಲಭ್ಯ ಲಭ್ಯವಾಗಿದೆ.

electricity-for-shettyhalli-and-chitrashettyhalli-in-shivamogga
ಶಿವಮೊಗ್ಗ : ದಶಕಗಳ ಹೋರಾಟದ ಬಳಿಕ ಶೆಟ್ಟಿಹಳ್ಳಿ- ಚಿತ್ರಶೆಟ್ಟಿಹಳ್ಳಿಗೆ ಬಂತು ವಿದ್ಯುತ್​

By ETV Bharat Karnataka Team

Published : Dec 9, 2023, 5:41 PM IST

Updated : Dec 9, 2023, 8:32 PM IST

ಬರೋಬ್ಬರಿ 60 ವರ್ಷದ ಬಳಿಕ ವಿದ್ಯುತ್ ಸೌಲಭ್ಯ; ಶೆಟ್ಟಿಹಳ್ಳಿ- ಚಿತ್ರಶೆಟ್ಟಿಹಳ್ಳಿಗೆ ಹೊಸ ಬೆಳಕು​

ಶಿವಮೊಗ್ಗ: ಗ್ರಾಮಸ್ಥರ ದಶಕಗಳ ಹೋರಾಟದ ಫಲವಾಗಿ ಇಂದು ಎರಡು ಗ್ರಾಮಗಳಿಗೆ ವಿದ್ಯುತ್​ ಸಂಪರ್ಕ ಲಭಿಸಿದೆ. ಶಿವಮೊಗ್ಗ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಕ್ಕೆ ಸರ್ಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಕಳೆದ ವರ್ಷ ಈ ಅವಳಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಆರಂಭವಾಗಿತ್ತು. ಈ ಗ್ರಾಮಗಳು ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದಲ್ಲಿದ್ದು, ಪುರದಾಳು ಗ್ರಾಮದಿಂದ ಮುಂದಕ್ಕೆ ಈ ಎರಡು ಗ್ರಾಮಗಳಿಗೆ ಯುಜಿ (ಅಂಡರ್ ಗ್ರೌಂಡ್) ವಿದ್ಯುತ್ ಸಂಪರ್ಕ ನೀಡಲಾಗಿದೆ. ಗ್ರಾಮದ ಪ್ರತಿ ಮನೆಗೂ ಪ್ರತ್ಯೇಕ ವಿದ್ಯುತ್ ಸೌಲಭ್ಯ ನೀಡಲಾಗಿದೆ.

ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳು 1962ರಲ್ಲಿ ರಚನೆಯಾದವು. ಇದಕ್ಕೂ ಮುನ್ನ ಇದು ದಟ್ಟ ಕಾನನ ಪ್ರದೇಶವಾಗಿತ್ತು. ಶರಾವತಿ ನದಿಗೆ ಪ್ರಥಮ ಬಾರಿಗೆ ನಿರ್ಮಿಸಿದ ಹಿರೇ ಭಾಸ್ಕರ ಡ್ಯಾಂ ಹಾಗೂ ನಂತರ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯಗಳು ಈ ಗ್ರಾಮಗಳ ಹುಟ್ಟಿಗೆ ಕಾರಣವಾಯಿತು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ನೂರಾರು ಗ್ರಾಮಗಳು ಮುಳುಗಡೆಯಾದಾಗ ಅಲ್ಲಿನ ಜನರನ್ನು ಅಂದಿನ ಕೆಪಿಸಿಯವರು ಇಲ್ಲಿಗೆ ಕರೆತಂದಿದ್ದರು. ಅಂದು ಇವರಿಗೆ ಒಂದು ಮನೆ ಕೂಡ ಇರಲಿಲ್ಲ. ಉಳುಮೆ ಮಾಡಲು ಭೂಮಿಯೂ ಇರಲಿಲ್ಲ. ಬಳಿಕ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯವಸಾಯವನ್ನು ಮಾಡಿ ಬದುಕು ಕಟ್ಟಿಕೊಂಡರು. ಇಲ್ಲಿನ ಮಕ್ಕಳು ಶಿವಮೊಗ್ಗ ನಗರದ ವಿವಿಧ ಹಾಸ್ಟೆಲ್​ಗಳಲ್ಲಿ ಇದ್ದುಕೊಂಡು ಓದುತ್ತಿದ್ದಾರೆ.

ಈ ಗ್ರಾಮಗಳಲ್ಲಿನ ಜನರು ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಮೂಲ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 2014ರಲ್ಲಿ ರಿಟ್ ಅರ್ಜಿ ಸಲ್ಲಿಸಿದಾಗ ಹೈಕೋರ್ಟ್ ಇವರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆದೇಶ ನೀಡಿತ್ತು. ನಂತರ ಸರ್ಕಾರ ರಸ್ತೆ ನಿರ್ಮಾಣಕ್ಕೆ ಆದೇಶ ನೀಡಿ, ಸ್ಥಳೀಯ ಶಾಸಕರ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಈ ರಸ್ತೆಯ ಕಾಮಗಾರಿಯು ಅರ್ಧಕ್ಕೆ ನಿಂತು ಹೋಗಿದೆ. ಈಗ ಮೆಸ್ಕಾಂ ವತಿಯಿಂದ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇದು ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಉಮಾಪತಿ, ನಮ್ಮನ್ನು ಇಲ್ಲಿಗೆ 1962ರಲ್ಲಿ ತಂದು ಬಿಡಲಾಯಿತು. ನಮಗೆ ಮೂಲಸೌಕರ್ಯ ಕೊಡುವಂತೆ ಸಾಕಷ್ಟು ಹೋರಾಟ, ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರನ್ನು ಸಣ್ಣ ವಯಸ್ಸಿನಲ್ಲಿಯೇ ಶಿವಮೊಗ್ಗ ನಗರದಲ್ಲಿ ಬಿಟ್ಟು ಓದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.‌ ಈಗ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದು ನಮಗೆಲ್ಲಾ ಸಂತೋಷ ತಂದಿದೆ ಎಂದು ಹೇಳಿದರು.

ಚಿತ್ರಶೆಟ್ಟಿಹಳ್ಳಿಯ ಕೃಷ್ಣಪ್ಪ ಅವರು ಮಾತನಾಡಿ, ನಮ್ಮ ಹೋರಾಟಕ್ಕೆ ಈಗ ಪ್ರಥಮ ಹಂತದ ಜಯ ಸಿಕ್ಕಿದೆ. ವಿದ್ಯುತ್ ಲಭಿಸಿರುವುದು ನಮಗೆಲ್ಲಾ ಸಂತೋಷವನ್ನುಂಟು ಮಾಡಿದೆ. ಕಳೆದ 15 ವರ್ಷಗಳ ಹಿಂದೆ‌ ನಾವು ಸೋಲಾರ್ ದೀಪಗಳನ್ನು ಬಳಕೆ ಮಾಡುತ್ತಿದ್ದೆವು. ಇದು ಮಳೆಗಾಲದಲ್ಲಿ ಲಭ್ಯವಾಗುತ್ತಿರಲಿಲ್ಲ. ಈಗ ನಮ್ಮ ಗ್ರಾಮಗಳಿಗೆ ವಿದ್ಯುತ್ ಬಂದಿದೆ. ಇದೇ ರೀತಿ, ರಸ್ತೆ, ಆಸ್ಪತ್ರೆ, ಮೊಬೈಲ್ ಟವರ್, ಶಾಲೆಗೆ ಖಾಯಂ ಶಿಕ್ಷಕರನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಸುವರ್ಣಸೌಧದಲ್ಲಿ‌ ಸ್ಪೀಕರ್, ಸಭಾಪತಿಯಿಂದ ಹಸಿರು ಪಣ: ಶಾಸಕರ ಹೆಸರಲ್ಲೊಂದು ಗಿಡ ನೆಡುವ ಪ್ರಯೋಗ

Last Updated : Dec 9, 2023, 8:32 PM IST

ABOUT THE AUTHOR

...view details