ಶಿವಮೊಗ್ಗ:ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿಯೇ ಗಾಂಜಾ ಬೆಳೆದ ಎಂಬಿಬಿಎಸ್, ಎಂಡಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ವಿಘ್ನರಾಜ್ (28), ಪಾಂಡಿದೊರೈ (27) ಹಾಗೂ ಕೇರಳ ರಾಜ್ಯದ ವಿನೋದ್ ಕುಮಾರ್ (27) ಬಂಧಿತ ವಿದ್ಯಾರ್ಥಿಗಳಿ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ತಾವು ಬಾಡಿಗೆ ಪಡೆದ ಮನೆಯಲ್ಲಿ ಪಾಲಿ ಹೌಸ್ ರೀತಿಯಲ್ಲಿ ಕೃತಕವಾಗಿ ಗಾಂಜಾ ಬೆಳೆಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 227 ಗ್ರಾಂ ಒಣ ಗಾಂಜಾ, 1.530 ಕೆ.ಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳು, 3 ಕೆನಾಬಿಸ್ ಆಯಿಲ್ ಸಿರೀಂಜ್ ರೀತಿಯ ವಸ್ತುಗಳು, 3 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಟಾಂಡ್ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 1 ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಬಬಕಲೈಸರ್ , 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕ್ಯಾಪ್ಗಳು, ಗಾಂಜಾ ಗಿಡದ ಕಾಂಡಗಳು, 19 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ವಿರುದ್ದ 0195/2023 ಕಲಂ NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಬಂಧಿತರೆಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳು. ಇದರಲ್ಲಿ ವಿಘ್ನರಾಜ್ ಎಂಬಾತ ಶಿವಮೊಗ್ಗದ ಶಿವಗಂಗಾ ಲೇಔಟ್ನಲ್ಲಿ ನ್ಯಾಯಾಧೀಶರೊಬ್ಬರ ಮನೆಯನ್ನು ಬಾಡಿಗೆ ಪಡೆದು ಕೃತ್ಯ ಎಸಗಿದ್ದಾರೆ. ಮನೆಯಲ್ಲಿಯೇ ಗಾಂಜಾವನ್ನು ಪಾಲಿ ಹೌಸ್ ಮಾದರಿಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಬೆಳೆದ ಪ್ರಕರಣ ಇದಾಗಿದೆ. ಗಾಂಜಾ ಬೆಳೆಯಲು ಗಾಂಜಾ ಬೀಜ, ಮಣ್ಣು, ಔಷಧ ಸೇರಿದಂತೆ ಎಲ್ಲಾವನ್ನು ಆನ್ಲೈನ್ನಲ್ಲಿಯೇ ಖರೀದಿ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.