ಶಿವಮೊಗ್ಗ:ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ತಪ್ಪಿತಸ್ಥನಲ್ಲ. ಕೋರ್ಟ್ನಲ್ಲೂ ನನಗೆ ಕ್ಲೀನ್ಚಿಟ್ ಸಿಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅರ್ಜಿ ಸಲ್ಲಿಕೆ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತನಿಖೆಯಲ್ಲಿ ನನಗೆ ಕ್ಲೀನ್ಚಿಟ್ ಸಿಕ್ಕಿದೆ. ಪ್ರಕರಣದಿಂದ ಮುಕ್ತವಾಗಿ ಹೊರಬಂದಿದ್ದೇನೆ. ಅವರಿಗೆ ಕೋರ್ಟ್‌ಗೆ ಹೋಗೋ ಅಧಿಕಾರ ಇದೆ, ಹೋಗಿದ್ದಾರೆ ಎಂದರು.
ನಾನು ತಪ್ಪಿತಸ್ಥನಲ್ಲ, ಕೋರ್ಟ್ನಲ್ಲೂ ನನಗೆ ಕ್ಲೀನ್ಚಿಟ್ ಸಿಗುತ್ತೆ: ಈಶ್ವರಪ್ಪ ವಿಶ್ವಾಸ ಇದನ್ನೂ ಓದಿ:ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ : ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕುಟುಂಬಸ್ಥರು
ಸಂತೋಷ್ಗೂ ನನಗೂ ಯಾವುದೇ ಸಂಬಂಧವಿಲ್ಲ: ನನ್ನ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದಿದ್ರೆ ತಪ್ಪಾಗುತ್ತೆ?. ಎಫ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗಿನ ಗೃಹಮಂತ್ರಿ ಕೆ.ಜೆ ಜಾರ್ಜ್ ಕೂಡ ಗಣಪತಿ ಆತ್ಮಹತ್ಯೆ ಕೇಸ್‌ನಲ್ಲಿ ರಾಜೀನಾಮೆ ಕೊಟ್ಟಿದ್ದರು. ಗಣಪತಿ ಅವರೇ ಡೆತ್ನೋಟ್ ಬರೆದಿಟ್ಟಿದ್ದರು. ನಾನು ವಿಪಕ್ಷ ಸ್ಥಾನದಲ್ಲಿದ್ದು ರಾಜೀನಾಮೆ ಕೊಡಿ ಎಂದು ಜಾರ್ಜ್ ಅವರಿಗೆ ಒತ್ತಾಯ ಮಾಡಿದ್ದೆ. ಅವರು ತನಿಖೆಯಲ್ಲಿ ಕ್ಲೀನ್ಚಿಟ್ ಪಡೆದು ಮತ್ತೆ ಕ್ಯಾಬಿನೆಟ್ ಸೇರಿಕೊಂಡರು. ಈಗ ಪ್ರಶ್ನೆ ಬಂದಿರೋದು ನನ್ನ ಮೇಲೆ ಆಪಾದನೆ ಬಂದಿದ್ದಕ್ಕೆ. ಸಂತೋಷ್ಗೂ ನನಗೂ ಸಂಬಂಧವೇ ಇಲ್ಲ ಎಂದು ತನಿಖಾಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ಕೋರ್ಟ್ ತ್ವರಿತವಾಗಿ ತೀರ್ಪು ನೀಡಲಿ:ಆತ ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂದು ತನಿಖೆಯ ರಿಪೋರ್ಟ್ನಿಂದ ಗೊತ್ತಾಗಬೇಕು. ಅದು ನನಗೆ ಗೊತ್ತಿಲ್ಲ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾಟ್ಸ್ಆ್ಯಪ್ನಲ್ಲಿ ನನ್ನ ಹೆಸರಿತ್ತು. ಹೀಗಾಗಿ ರಾಷ್ಟ್ರೀಯ ನಾಯಕರ ಅನುಮತಿ ಪಡೆದು ರಾಜೀನಾಮೆ ಕೊಟ್ಟೆ. ಇದೆಲ್ಲ ಕೋರ್ಟ್ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೆ. ನನಗೆ ಜವಾಬ್ದಾರಿ ಕೊಡೋದು, ಮಂತ್ರಿ ಸ್ಥಾನ ಸಿಗೋದು ಬಿಡೋದು ಬೇರೆ. ಕೋರ್ಟ್ ಕೂಡ ತ್ವರಿತವಾಗಿ ತೀರ್ಪು ನೀಡಲಿ ಎಂದು ಪ್ರಾರ್ಥಿಸುವುದಾಗಿ ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಉಡುಪಿ ಕೃಷ್ಣನ ದರ್ಶನ ಮಾಡಬೇಕು: ಸಿದ್ದರಾಮಯ್ಯ ಈಗಾಗಲೇ ಕನಕ ಗುರು ಪೀಠ, ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದು ಸಂತೋಷವಾಗಿದೆ. ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ವಿಶ್ವಪ್ರಸಿದ್ಧ ಉಡುಪಿ ಕೃಷ್ಣನ ದರ್ಶನವನ್ನೂ ಸಿದ್ದರಾಮಯ್ಯ ಪಡೆಯಬೇಕು. ಕನಕದಾಸರ ಭಕ್ತರಿಗೆ ಮೆಚ್ಚಿ ಕೃಷ್ಣ ದರ್ಶನ ನೀಡಿದ್ದಾನೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಹೋಗಿಲ್ಲ ಎನ್ನುವ ಅನುಮಾನ ಎಲ್ಲರಂತೆ ನನಗೂ ಇದೆ ಎಂದರು.
ಇದನ್ನೂ ಓದಿ:ಈಶ್ವರಪ್ಪಗೆ ಕ್ಲೀನ್ಚಿಟ್: ಬಿ ರಿಪೋರ್ಟ್ನಲ್ಲಿ ಇಲ್ಲದ ದಾಖಲೆ ಸಲ್ಲಿಸಲು ಪೊಲೀಸರಿಗೆ ಕೋರ್ಟ್ ನಿರ್ದೇಶನ