ಶಿವಮೊಗ್ಗ :ಮುಂದಿನ ಆರು ತಿಂಗಳಲ್ಲಿ ಸಿಎಂ ಬದಲಾವಣೆ ಆಗಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಕೊರೊನಾದಿಂದಾಗಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ. ಬಿಜೆಪಿ ಪಕ್ಷದ ಶಾಸಕರುಗಳಿಗೆ ಅನುದಾನ ನೀಡುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅವರೆಲ್ಲಾ ಎಂಎಲ್ಸಿ ಹಾಗೂ ರಾಜ್ಯಸಭಾ ಚುನಾವಣೆ ನಡೆಯಲಿ ಎಂದು ಕಾಯುತ್ತಿದ್ದಾರೆ. ಹೆಚ್. ವಿಶ್ವನಾಥ್ ಅವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು. ಇವರಿಗೆ ಜೆಡಿಎಸ್ನಲ್ಲಿ ಟಿಕೇಟ್ ನೀಡಿ, ಶಾಸಕರನ್ನಾಗಿಸಿ ನಂತರ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಈಗ ಬಿಜೆಪಿಗೆ ಬಂದು ಸೋಲುವಂತಾಯಿತು. ಈಗ ಎಂಎಲ್ಸಿ ಟಿಕೇಟ್ ಸಹ ಇಲ್ಲದ ಪರಿಸ್ಥಿತಿ ಬಂದಿದೆ. ಅವರಿಗೆ ತಕ್ಕ ಪಾಠವಾಗಿದೆ ಎಂದು ಗುಡುಗಿದರು.