ಶಿವಮೊಗ್ಗ :ಎರಡು ದಿನಗಳ ಹಿಂದೆ ಶಿಕಾರಿಪುರದ ನಮ್ಮ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಮೀಸಲಾತಿ ಹೋರಾಟ ಅಲ್ಲಾ, ಇದೊಂದು ನೆಪ ಅಷ್ಟೇ. ಕಾಣದ ಕೈಗಳು ಸೇರಿಕೊಂಡ ಕಾಂಗ್ರೆಸ್ ಪ್ರಾಯೋಜಿತದಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ ರಾಘವೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿಕಾರಿಪುರದಲ್ಲಿ ನಡೆದ ಘಟನೆ ನಿಜಕ್ಕೂ ತುಂಬ ಬೇಸರ ತಂದಿದೆ. ಇದು ಮೀಸಲಾತಿ ಹೋರಾಟದ ನೆಪ ಅಷ್ಟೇ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮೀಸಲಾತಿ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಜನರಿಗೆ ತಪ್ಪು ಗ್ರಹಿಕೆ ಮೂಡಿಸುವ ಸಲುವಾಗಿ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ತರಹದ ಘಟನೆಗಳು ಇನ್ಮುಂದೆ ನಡೆಯುವುದಿಲ್ಲ. ಕೆಲವು ಸಹಿಸಿಕೊಳ್ಳಲು ಆಗದ ಕೆಟ್ಟ ಮನಸ್ಸಿನವರು ನಮ್ಮ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಎಂದು ಹೇಳಿದರು.
ಭದ್ರತಾ ವೈಫಲ್ಯ ಆಗಿಲ್ಲ :ತಮ್ಮ ಪ್ರಾಣದ ಹಂಗು ತೊರೆದು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗಾಗಿ ನಮ್ಮ ಮನೆ ಮೇಲೆ ಆಗಿರುವ ಕಲ್ಲು ತೂರಾಟ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲಾ ಎಂದು ಸಂಸದರು ಸ್ಪಷ್ಟವಾಗಿ ತಿಳಿಸಿದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ :ನಂತರ ಮಾತನಾಡಿದ ಸಂಸದರು ಯಾವುದೇ ಕಾರಣಕ್ಕೂ ಭದ್ರವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (ವಿಐಎಸ್ಲ್) ಕಾರ್ಖಾನೆಯನ್ನು ಮುಚ್ಚುವುದಿಲ್ಲ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಸಂಸದರು ಅಭಯ ನೀಡಿದರು.