ಶಿವಮೊಗ್ಗ: ನಗರದ ರಾಗಿಗುಡ್ಡ (ಶಾಂತಿನಗರ) ಬಡಾವಣೆಯಲ್ಲಿ ಅಕ್ಟೋಬರ್ 1 ರಂದು ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಸಭೆ ನಡೆಯಿತು. ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಉಸ್ತುವಾರಿ ಸಚಿವರು ಸ್ಥಳಕ್ಕೆ ಹೆಸರಿಗೆ ಮಾತ್ರ ಅರ್ಧ ಗಂಟೆ ಬಂದು ಹೋದರು. ಗೃಹ ಸಚಿವರು ಇದನ್ನು ಸಣ್ಣ ಘಟನೆ ಎನ್ನುತ್ತಾರೆ. ರಾಗಿಗುಡ್ಡ ಘಟನೆಯ ನ್ಯಾಯಾಂಗ ತನಿಖೆ ಆಗಬೇಕು. ಈ ಬಗ್ಗೆ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅಲ್ಲದೆ, ಈ ಕುರಿತಂತೆ ಎನ್ಐಎ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದರು.
"ನಿಷ್ಠಾವಂತ ಪೊಲೀಸರ ಪಟ್ಟಿ ಮಾಡಿ ಅಮಾನತು ಮಾಡಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ರಾಜ್ಯದಲ್ಲಿ ನಾಟಕ ಮಾಡುತ್ತಿದೆ. ರೈತರಿಗೆ ಸರಿಯಾದ ನೀರು, ವಿದ್ಯುತ್ ನೀಡಲು ವಿಫಲವಾಗಿದೆ. ರಾಗಿಗುಡ್ಡದ ಕೇಸುಗಳನ್ನು ಕೈಬಿಡಬೇಕು" ಎಂದು ರಾಘವೇಂದ್ರ ಆಗ್ರಹಿಸಿದರು.