ಶಿವಮೊಗ್ಗ :ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ವಾಯುಸೇನೆ ಭರ್ಜರಿ ಅವಕಾಶ ನೀಡುತ್ತಿದ್ದು, ಸೇನೆ ಸೇರ ಬಯಸುವ ವಿದ್ಯಾರ್ಥಿಗಳು ಜು.17 ರಿಂದ 22ವರೆಗೆ ಜಿಲ್ಲೆಯಲ್ಲಿ ನಡೆಯುವ ವಾಯುಸೇನಾ ಭರ್ತಿರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ವತಿಯೊಂದ ಸೇನಾ ಭರ್ತಿರ‍್ಯಾಲಿಯನ್ನು ಆಯೋಜಿಸಲಾಗುತ್ತಿದ್ದು, ಸೇನಾರ‍್ಯಾಲಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಜಿಲ್ಲಾಡಳಿತ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬುದರ ಕುರಿತು ಜು.07 ಹಾಗೂ 14 ರಂದು ಜಿಲ್ಲಾಡಳಿತ ತರಬೇತಿ ಆಯೋಜನೆ ಮಾಡಿದೆ ಎಂದರು.
ಜು.17 ಮತ್ತು 18ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು,ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯವರಿಗೆ ಫಿಟ್ನೆಸ್ ಮತ್ತು ಲಿಖಿತ ಪರೀಕ್ಷೆ ನಡೆಯಲಿದೆ. 19 ಮತ್ತು 20ರಂದು ರಾಜ್ಯದ ಎಲ್ಲಾ ಜಿಲ್ಲೆಯವರಿಗೆ ಪರೀಕ್ಷೆ ನಡೆಯಲಿದೆ. 21 ಹಾಗೂ 22ರಂದು ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ , ಮಂಡ್ಯ , ಕೋಲಾರ, ಚಿಕ್ಕ ಬಳ್ಳಾಪುರ, ಚಮರಾಜನಗರ, ಮೈಸೂರು, ಮಡಕೇರಿ, ದಕ್ಷಿಣ ಕನ್ನಡ , ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ್ , ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯವರಿಗೆ ಫಿಟ್ನೆಸ್ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ.
ಸೇನೆಗೆ ಸೇರ ಬಯಸುವವರು 19 ಜುಲೈ 1999 ರಿಂದ 01 ಜುಲೈ 2003 ರ ನಡುವೆ ಜನಿಸಿದವರಾಗಿರಬೇಕು. ಮೆಡ್ ಅಸಿಸ್ಟೆಂಟ್ ,ಐಎಎಫ್ಪಿ , ಆಟೋ ಟೆಕ್ ಟ್ರೇಡ್ ಹೀಗೆ ಮೂರು ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಇಲ್ಲಿ ನೇಮಕಾತಿ ಆದವರಿಗೆ ಬೇಸಿಕ್ 30 ಸಾವಿರ ರೂ ಸಂಬಳ ನಿಗದಿ ಮಾಡಲಾಗಿದೆ. ಸೇನಾ ನೇಮಕಾತಿಯ ಸದುಪಯೋಗವನ್ನು ಜಿಲ್ಲೆಯ ಯುವಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.