ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ 6 ಜನ ಅಂತರ್ ರಾಜ್ಯ ಸರಗಳ್ಳರನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ.
6 ಜನ ಅಂತರ್ ರಾಜ್ಯ ಸರಗಳ್ಳರ ಬಂಧನ.. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಫೈಸಲ್, ಸಲ್ಮಾನ್, ಆಶೀಸ್, ಮೆಹತಾಬ್, ಸಲ್ಮಾನ್ ಅಲಿಯಾಸ್ ಮಾಮ ಹಾಗೂ ಮೀರತ್ ಮೂಲದ ಶಿವಮೊಗ್ಗದ ನಿವಾಸಿ ಮಹಮ್ಮದ್ ಚಾಂದ್ ಬಂಧಿತ ಆರೋಪಿಗಳು. ಮಹಮ್ಮದ್ ಚಾಂದ್ ಶಿವಮೊಗ್ಗದ ಜೊಸೇಫ್ ನಗರದ ನಿವಾಸಿಯಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಉಳಿದ ಐವರು ಕಳ್ಳರು ಕಳೆದ ವರ್ಷ ಬಂದು ಕಳ್ಳತನ ಮಾಡಿ ವಾಪಸ್ ಆಗಿದ್ದರು. ಈ ವರ್ಷವು ಸಹ ಅದೇ ರೀತಿ ಮಾಡಲು ಬಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಳೆದ ತಿಂಗಳು ಎರಡು ದಿನದಲ್ಲಿ ಐದು ಕಡೆ ಮಹಿಳೆಯರ ಸರಗಳ್ಳತನ ನಡೆದಿತ್ತು. ಈ ಕುರಿತು ಪೊಲೀಸ್ ಇಲಾಖೆ ತೀವ್ರ ಹುಡುಕಾಟ ನಡೆಸುತ್ತಿತ್ತು. ಚರ್ಚ್ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೃದ್ಧೆಯ ಸರ ಕಸಿದು ಬೈಕ್ನಲ್ಲಿ ಪರಾರಿಯಾಗುವ ವೇಳೆ ಸಾರ್ವಜನಿಕರು ಕೋಟೆ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಪೊಲೀಸರು ಬೆನ್ನಟ್ಟಿ ವಿದ್ಯಾನಗರದಲ್ಲಿ ಆರೋಪಿಗಳ ಬೈಕ್ಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ. ಈ ವೇಳೆ ಇವರ ಬಳಿ ಇದ್ದ ಪಿಸ್ತೂಲ್ ಬಿದ್ದಿದೆ. ತಕ್ಷಣ ಪರಾರಿಯಾಗಲು ಯತ್ನಿಸಿದಾಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರನ್ನು ಲಾಡ್ಜ್ನಲ್ಲಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರು ಮೀರತ್ನಿಂದ ಬೈಕ್ನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಒಂದು ಬೈಕ್, ಎರಡು ಪಿಸ್ತೂಲ್, 12 ಜೀವಂತ ಗುಂಡು ಹಾಗೂ 213.20 ಗ್ರಾಂ ತೂಕದ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಮೀರತ್‌ಗೆ ಹೋಗಿ ಬಂಗಾರವನ್ನು ವಶಕ್ಕೆ ಪಡೆದುಕೊಂಡು ಬಂದ ಕೋಟೆ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್, ಪಿಎಸ್ಐ ಶಿವಾನಂದ ಕೋಳಿ ಹಾಗೂ ಸಿಬ್ಬಂದಿಗಳಾದ ಮೋಹನ್, ಗೋಪಾಲ್, ಸುಧಾಕರ್ ತಂಡಕ್ಕೆ ಎಸ್ಪಿ ಕೆ.ಎಂ.ಶಾಂತರಾಜು 20 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿದ್ದಾರೆ.