ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ 41 ನೇ ರೈತ ಹುತಾತ್ಮ ದಿನಾಚರಣೆ: ರೈತ ವಿರೋಧಿ 3 ಕೃಷಿ ಕಾಯಿದೆ ರದ್ದುಪಡಿಸಲು ರೈತ ಸಂಘದ ಆಗ್ರಹ - ಏತನೀರಾವರಿ ಮತ್ತು ಬೃಹತ್ ನೀರಾವರಿ ಯೋಜನೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ನಾಗಸಮುದ್ರ ಗ್ರಾಮದಲ್ಲಿ ಪೊಲೀಸರ ಗುಂಡೇಟಿಗೆ 3 ಜನ ರೈತರು ಹುತಾತ್ಮರಾಗಿದ್ದರು. ಅಂದಿನಿಂದ ರೈತ ಹುತಾತ್ಮ ದಿನವನ್ನು ರೈತ ಸಂಘ ಆಚರಿಸಿಕೊಂಡು ಬರುತ್ತಿದೆ.

41st Farmer Martyrs Day was celebrated in Bhadravati Taluk Nagasamudra.
ಭದ್ರಾವತಿ ತಾಲೂಕು ನಾಗಸಮುದ್ರದಲ್ಲಿ 41 ನೇ ರೈತ ಹುತಾತ್ಮ ದಿನ ಆಚರಿಸಲಾಯಿತು.

By

Published : May 25, 2023, 6:22 PM IST

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ನಾಗಸಮುದ್ರದಲ್ಲಿ ನಡೆದ 41ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನ ತಕ್ಷಣವೇ ರದ್ದು ಪಡಿಸಬೇಕು. ಡಾ. ಸ್ವಾಮಿನಾಥನ್‌ ಅವರ ವರದಿ ಜಾರಿ, ಬಗರ್‌ಹುಕ್ಕುಂ ರೈತರಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

1982ರಲ್ಲಿ ಮೇ 25 ರಂದು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಪೊಲೀಸರು 3 ಜನ ರೈತರಿಗೆ ಗುಂಡೇಟು ನೀಡಿದ್ದರು. ಇದರಿಂದ ಮೂವರು ರೈತರು ಹುತಾತ್ಮರಾಗಿದ್ದರು. ರೈತ ಸಂಘ ಅಂದಿನಿಂದ ಪ್ರತಿ ವರ್ಷ ರೈತ ಹುತಾತ್ಮ ದಿನ ಆಚರಿಸಿಕೊಂಡು ಬರುತ್ತಿದೆ. ರೈತರು‌ ಹುತಾತ್ಮರಾದ ಸ್ಥಳದಲ್ಲಿಯೇ ಹುತಾತ್ಮ ಸ್ಮಾರಕವನ್ನು ನಿರ್ಮಾಣ‌ ಮಾಡಲಾಗಿದೆ.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಅವರು ಮಾತನಾಡಿ, 2023 ರ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ, ಡಿ.ಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಭಿನಂದಿಸುತ್ತದೆ ಎಂದರು.

ಕರ್ನಾಟಕದಲ್ಲಿ ವಿಶೇಷವಾಗಿ ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದ ಜನರು, ಬಡವರು ಎಲ್ಲ ಜಾತಿಯ, ಧರ್ಮದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ಬಹಳಷ್ಟು ಆಕಾಂಕ್ಷೆಗಳನ್ನು ಇಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ. ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಬೇಕು. ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಹೇಳಿದರು.

ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡುವುದು. ರೈತರಿಂದ ದವಸ ಧಾನ್ಯಗಳನ್ನ ಖರೀದಿ ಮಾಡಲು ಆವರ್ತನಿಧಿಯನ್ನು ಮೀಸಲಿಡುವುದು. ಬಗರ್‌ಹುಕ್ಕುಂ ರೈತರಿಗೆ ಹಕ್ಕುಪತ್ರ ವಿತರಿಸಬೇಕು, ಮಲೆನಾಡು ಭಾಗದ ಭೂಮಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.

ವಿದ್ಯುತ್ ಖಾಸಗೀಕರಣ ಮಾಡಬಾರದು. ಏತನೀರಾವರಿ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡಬೇಕು. ರೈತರು ಇನ್ನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತ ಪರ ಪ್ರಣಾಳಿಕೆ ಸಿದ್ಧಗೊಳಿಸಿ ಕರ್ನಾಟಕ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸಭೆಯಲ್ಲಿ ಬಿಜೆಪಿ ಕಾಂಗ್ರೇಸ್, ಜೆಡಿಎಸ್ ಪಕ್ಷದ ನಾಯಕರಿಗೆ ನೀಡಲಾಗಿತ್ತು ಎಂದು ಹೇಳಿದರು.

ಈ ಸಭೆಯಲ್ಲಿ ಬಿಜೆಪಿ ಪಕ್ಷದಿಂದ ಯಾರು ಭಾಗವಹಿಸಿರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ, ಕರ್ನಾಟಕದ ಉಸ್ತುವಾರಿ ಆನಂದ ಶರ್ಮಾ ಭಾಗವಹಿಸಿದ್ದರು. ರೈತರ ಸಮಸ್ಯೆಯ ಈ ಪ್ರಣಾಳಿಕೆ ಒಪ್ಪಿಕೊಂಡು ಈಡೇರಿಸುವುದಾಗಿ ಗ್ಯಾರಂಟಿ ಪತ್ರಕ್ಕೆ ಪ್ರೋ. ರಾಧಾಕೃಷ್ಣರವರು ಪಕ್ಷದ ಪರ ಸಹಿ ಹಾಕಿದ್ದರು. ಜೆಡಿಎಸ್ ಪಕ್ಷದಿಂದ ತಿಪ್ಪೇಸ್ವಾಮಿ ಅವರು ಪ್ರಣಾಳಿಕೆಯನ್ನು ಒಪ್ಪಿ ಸಹಿ ಮಾಡಿದ್ದರು ಎಂದು ತಿಳಿಸಿದರು.

ಪ್ರಣಾಳಿಕೆಯಲ್ಲಿರುವ ರೈತರ ಬೇಡಿಕೆಗಳನ್ನ ತಕ್ಷಣ ಈಡೇರಿಸಬೇಕು. ಪ್ರಸ್ತುತ ಅಕಾಲಿಕ ಮುಂಗಾರು ಮಳೆಗೆ ಮನೆ , ಬೆಳೆ ಹಾನಿ, ಜನ-ಜಾನುವಾರು ಸಾವನಪ್ಪಿದ್ದು, ಇದಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್​ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು, ರೈತ ಸಂಘದ ಕಾರ್ಯಕರ್ತರು ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.

ಇದನ್ನೂಓದಿ:ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಕಚೇರಿಗೆ ಸಿಬ್ಬಂದಿ ವರ್ಗದವರಿಂದ ಕುಂಬಳಕಾಯಿ ಪೂಜೆ

ABOUT THE AUTHOR

...view details