ರಾಮನಗರ:ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಬೇಕಿರುವ ಸೌಲಭ್ಯವನ್ನು ಕಲ್ಪಿಸಿ ಸರ್ಕಾರಿ ಶಾಲೆಯ ಮುಂದೆ ದಾಖಲಾತಿಗೆ ಜನರು ಸರದಿ ಸಾಲಿನಲ್ಲಿ ನಿಲ್ಲುವಂತೆ ಬೆಳೆಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕಣ್ವ ಡಯಾಗ್ನಾಸ್ಟಿಕ್ ಡಾ. ವೆಂಕಟಪ್ಪ ಅವರು ಹೊಂಗನೂರು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುತ್ತಾರೆ ಹಾಗೂ ಶಾಲೆಗೆ ಬೇಕಿರುವ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿರುತ್ತಾರೆ. ಈ ಹಿನ್ನೆಲೆ ಸಚಿವರು ಇಂದು ಚನ್ನಪಟ್ಟಣ ತಾಲೂಕಿನ ಹೊಂಗನೂರು ಶಾಲೆಗೆ ಭೇಟಿ ನೀಡಿ ಚರ್ಚಿಸಿದರು.
ಹೊಂಗನೂರು ಶಾಲೆ 4.5 ಎಕರೆ ಸ್ಥಳಾವಕಾಶ ಹೊಂದಿದ್ದು, ಇಲ್ಲಿ ಕ್ರೀಡೆ, ಸಂಸ್ಕೃತಿಕ ಚಟುವಟಿಕೆ, ಪಠ್ಯ ಚಟುವಟಿಕೆ ನಡೆಸಲು ಮಕ್ಕಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಬಹುದು. ಇದಕ್ಕೆ ಒಳ್ಳೆಯ ರೀತಿಯಲ್ಲಿ ಯೋಜನೆ ರೂಪಿಸಿ ಡಾ. ವೆಂಕಟಪ್ಪ ಅವರು ಶಾಲೆ ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.