ರಾಮನಗರ: ರಾಜ್ಯದಲ್ಲಿ ಕೊರೊನಾದಿಂದ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೆ ಮಕ್ಕಳಿಗೆ ಅನಗತ್ಯವಾಗಿ ಆನ್ಲೈನ್ ಶಿಕ್ಷಣ ಎಂಬ ಹೊರೆ ಹೊರಿಸಲಾಗುತ್ತಿದೆ. ಇದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದು ಅವೈಜ್ಞಾನಿಕ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಆನ್ಲೈನ್ ಶಿಕ್ಷಣ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
ನಗರದ ಐಜೂರು ವೃತ್ತದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಆನ್ಲೈನ್ ಶಿಕ್ಷಣ ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ಆನ್ಲೈನ್ ಶಿಕ್ಷಣ ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಆನ್ಲೈನ್ ಶಿಕ್ಷಣ ವ್ಯವಸ್ಥೆಯ ಅಣಕು ಶವಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ತಜ್ಞರ ಸಲಹೆ ತರಿಸಿಕೊಂಡಿದೆ. ತಜ್ಞರು ಗ್ರೌಂಡ್ ವರ್ಕ್ ಮಾಡದೆ ಮನೆಯಲ್ಲೇ ಕುಳಿತು ವರದಿ ನೀಡಿದ್ದಾರೆ. ಗ್ರಾಮೀಣ ಜನತೆ ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗ ಆನ್ಲೈನ್ ಶಿಕ್ಷಣ ಕಡ್ಡಾಯಕ್ಕೆ ಸರ್ಕಾರ ನಿಂತಿದೆ. ಆದರೆ ಅದಕ್ಕಾಗಿ ಲ್ಯಾಪ್ಟಾಪ್ ಖರೀದಿಸಬೇಕು. 50 ಸಾವಿರ ರೂಪಾಯಿ ಅನಿವಾರ್ಯ. ಆದರೆ ಜನರ ಬಳಿ ಹಣ ಇಲ್ಲ. ಅಲ್ಲದೆ ಅದನ್ನು ಬಳಸಲು ಕೂಡ ಬರೋದಿಲ್ಲ. ಆದ್ದರಿಂದ ಆನ್ಲೈನ್ ಶಿಕ್ಷಣ ಕೈ ಬಿಡಬೇಕೆಂದು ಒತ್ತಾಯಿಸಿದರು.
ಪ್ರಪಂಚ ಹಾಗೂ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಮೊದಲು ಪ್ರಾಣ ಉಳಿಸಿ, ನಂತರ ಎಲ್ಲವನ್ನೂ ಮಾಡಿ. ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಕೂಡಲೇ ಅದಕ್ಕೆ ವ್ಯವಸ್ಥೆ ಕಲ್ಪಿಸಿ. ರಾಜ್ಯದ ಜನತೆ ಜೊತೆಗೆ ಚೆಲ್ಲಾಟ ಆಡಬೇಡಿ ಎಂದರು.