ರಾಮನಗರ: ಬ್ರಾಹ್ಮಣ ಸಮುದಾಯದತ್ತ ತಾರತಮ್ಯ ತೋರುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬ್ರಾಹ್ಮಣರಿಗೂ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ವಿಪ್ರ ಸಂಘದ ಸದಸ್ಯರು ಪ್ರತಿಭಟನೆ ನಡಸಿದರು. ರಾಮನಗರದ ಆಂಜನೇಯ ಸ್ವಾಮಿ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ವಿಶ್ವ ವಿಪ್ರ ಪರಿಷತ್ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ ಬ್ರಾಹ್ಮಣರು ದಾರಿ ಉದ್ದಕ್ಕೂ ಸರ್ಕಾರದ ನಿಲುವಿನ ವಿರುದ್ಧ ಘೋಷಣೆ ಕೂಗಿದರು.
ನಮ್ಮವರು ಆರ್ಥಿಕವಾಗಿ ಹಿಂದುಳಿದಿದ್ದಾರೆ:ಇನ್ನು ಬ್ರಾಹ್ಮಣ ಸಮುದಾಯವನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ, ಸಮುದಾಯಕ್ಕೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಹೋರಾಟ ನಡೆಸಿದ ಬ್ರಾಹ್ಮಣರು ನಮ್ಮ ಸಮುದಾಯದಲ್ಲೂ ಸಾಕಷ್ಟು ಬಡವರಿದ್ದು, ನಮ್ಮವರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆದರೆ ಸರ್ಕಾರ ಮಾತ್ರ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಸದಾ ಕಡೆಗಣಿಸುತ್ತಿದೆ ಎಂದು ಕಿಡಿಕಾರಿದರು.
ಹಾಗೆ ದೇಶದಲ್ಲಿ ಎಲ್ಲ ಜಾತಿಯವರಿಗೂ ಮೀಸಲಾತಿಯನ್ನು ನೀಡಲಾಗುತ್ತಿದೆ. ಆದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದಿರುವ ಬ್ರಾಹ್ಮಣರಿಗೆ ಮೀಸಲಾತಿ ಸಿಗುತ್ತಿಲ್ಲ. ಮೇಲ್ವರ್ಗದ ಬಡವರಿಗಾಗಿ ತಂದಿರುವ ಶೇಕಡ 10ರಷ್ಟು ಮೀಸಲಾತಿಯನ್ನು ನೀಡುತ್ತಿಲ್ಲ. ಅಲ್ಲದೇ ಕೇಂದ್ರ ಅಥವಾ ರಾಜ್ಯ ಬಿಜೆಪಿ ಸರ್ಕಾರಗಳು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಯೋಜನೆಗಳನ್ನು ನೀಡಿಲ್ಲ.