ರಾಮನಗರ:ಚನ್ನಪಟ್ಟಣ ತಾಲೂಕಿನ ಬಿವಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ಬಿಲ್ಗೆ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಆಡಿಯೋ ವೈರಲ್ ಆಗಿದೆ.
ಕಮಿಷನ್ ಕೇಳಿರುವ ಆಡಿಯೋ ವೈರಲ್: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕಾಮಗಾರಿ ನಡೆಸಿರುವ ವ್ಯಕ್ತಿಯಿಂದ ಶೇ 20ರಷ್ಟು ಕಮಿಷನ್ ಕೇಳಿರುವ ಆಡಿಯೋ ಈಗ ವೈರಲ್ ಆಗಿದೆ. ವ್ಯಕ್ತಿ ಒಬ್ಬರೊಂದಿಗೆ ಸಂಭಾಷಣೆ ನಡೆಸುವ ಪಿಡಿಒ ಶೋಭಾ ನೀವು ಮಾಡಿರುವ ಕೆಲಸದ ಗುಣಮಟ್ಟಕ್ಕೆ ದೂರು ನೀಡಲಾಗಿದ್ದು, ಈ ಕಾಮಗಾರಿಗೆ ದುಡ್ಡು ಕೊಡುವ ಹಾಗಿಲ್ಲ. ಆದರೂ ನಾನು ಬಿಲ್ ಪಾಸ್ ಮಾಡಿದ್ದೇನೆ. ನನಗೆ ಎರಡೇ ಪರ್ಸೆಂಟ್ ಸಾಕು ಎನ್ನುವ ಆಡಿಯೋ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಕ್ಕೆ ಪುಷ್ಠಿ ನೀಡುವಂತಿದೆ.
ಅಕ್ರಮ ನಡೆದಿರುವ ಶಂಕೆ: ವ್ಯಕ್ತಿ ಒಬ್ಬರು ಕಾಮಗಾರಿ ಬಿಲ್ ಕೇಳಿದ್ದಕ್ಕೆ ಬಿವಿ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶೋಭಾ ಕಾಮಗಾರಿ ಬಿಲ್ ನಲ್ಲಿ 20 ಪರ್ಸೆಂಟ್ ನೀಡಬೇಕು. ಕಮಿಷನ್ ಹಣದಲ್ಲಿ ಇಂಜಿನಿಯರ್, ಇಒ, ಡಿಎಸ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೂ ಹಣ ನೀಡಬೇಕು ಎಂದು ಹೇಳುವ ಆಡಿಯೋ ವೈರಲ್ ಆಗಿದೆ. ಹಿರಿಯ ಅಧಿಕಾರಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡಿದೆ. ಕಮಿಷನ್ ಕೇಳುವ ಆಡಿಯೋ ವೈರಲ್ ಆಗಿರುವುದರಿಂದ ಬಿವಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.