ರಾಮನಗರ: ಕಾರುಗಳ ತಯಾರಿಕೆಗೆ ಹೆಸರಾದ ಟೊಯೋಟಾ ಕಂಪನಿಯ ಬಿಡದಿ ಘಟಕದಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಭಾನುವಾರ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ್ ಚಾಲನೆ ಕೊಟ್ಟರು. ಈ ಎರಡು ಕಾರ್ಯಯೋಜನೆಗಳು ಭಾರತದ ಸ್ವಾವಲಂಬನೆಗೆ ಪೂರಕವಾಗುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ’ ಹಾಗೂ ‘ಕೌಶಲ್ಯ ಭಾರತ’ (ಸ್ಕಿಲ್ ಇಂಡಿಯಾ) ಕರೆಗಳಿಗೆ ಅನುಗುಣವಾಗಿವೆ ಎಂದು ಹೇಳಲಾಗಿದೆ.
ಮೊದಲನೇ ಕಾರ್ಯಯೋಜನೆಯು ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಮೂಲ ಸೌಕರ್ಯದ ವಿಸ್ತರಣೆ ಒಳಗೊಂಡಿದೆ. ಇದನ್ನು ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ನಿರ್ವಹಿಸಲಿದೆ. ಇದು ಯುವಕರಿಗೆ ಸುಧಾರಿತ ವಾಹನ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಉದ್ದೇಶ ಹೊಂದಿದೆ. ಎರಡನೇ ಕಾರ್ಯಯೋಜನೆಯು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ವೇಗ ನೀಡುವ ನಿಟ್ಟಿನಲ್ಲಿ ಅಗತ್ಯ ಬಿಡಿ ಭಾಗಗಳ ಉತ್ಪಾದನೆಗೆ ಸಂಬಂಧಿಸಿದ್ದು, ಇದನ್ನು, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ನಿರ್ವಹಿಸಲಿದೆ.