ರಾಮನಗರ:ಜೆಡಿಎಸ್ ಎನ್ಡಿಎ ಒಕ್ಕೂಟ ಸೇರಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಪಕ್ಷದ ಮುಸ್ಲಿಂ ಮುಖಂಡರು ಹಾಗೂ ಮಾಜಿ ಶಾಸಕ ಎಂ ಸಿ ಅಶ್ವಥ್ ಸೇರಿದಂತೆ ಪ್ರಮುಖ ನಾಯಕರು ವರಿಷ್ಠರ ನಿರ್ಧಾರ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಸಂಸದ ಡಿ ಕೆ ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ತೆರೆಮರೆಯಲ್ಲಿ ಆಪರೇಷನ್ ಹಸ್ತ ನಡೆಸಿದೆ.
ಜೆಡಿಎಸ್ ವರಿಷ್ಠರ ನಿರ್ಧಾರದಿಂದ ಅಸಮಾಧಾನಗೊಂಡವರಲ್ಲಿ ಹೆಚ್‌ಡಿಕೆ ಆಪ್ತ, ಮಾಜಿ ಶಾಸಕ ಎಂ.ಸಿ ಅಶ್ವಥ್ ಕೂಡ ಒಬ್ಬರು. ಇವರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಡಿ.ಕೆ ಬ್ರದರ್ಸ್ ಯಶಸ್ವಿಯಾಗಿದ್ದು, ಪಕ್ಷಕ್ಕೆ ಆಹ್ವಾನಿಸುವ ಸಲುವಾಗಿ ನಿನ್ನೆ ಸಂಸದ ಡಿ.ಕೆ ಸುರೇಶ್ ಚನ್ನಪಟ್ಟಣದಲ್ಲಿರುವ ಅಶ್ವಥ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಮಾತುಕತೆ ಸಫಲ ಅ.2 ರಂದು ಕಾಂಗ್ರೆಸ್ ಸೇರ್ಪಡೆ:ಸಂಸದ ಡಿ.ಕೆ. ಸುರೇಶ್ ಮತ್ತು ಎಂ.ಸಿ. ಅಶ್ವಥ್ ನಡುವಿನ ಮಾತುಕತೆ ಫಲಪ್ರದವಾಗಿದ್ದು, ಅಶ್ವಥ್ ಕಾಂಗ್ರೆಸ್ ಪಕ್ಷ ಸೇರಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಎಂ.ಸಿ ಅಶ್ವಥ್ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.
ದಶಕದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿರುವ ನಾಯಕರು:ಮಾಜಿ ಶಾಸಕ ಎಂ.ಸಿ ಅಶ್ವಥ್ 30 ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮೊದಲಿಂದಲೂ ಡಿ.ಕೆ. ಶಿವಕುಮಾರ್ ಜೊತೆ ವಿಶೇಷ ಸ್ನೇಹ ಸಂಬಂಧ ಇಟ್ಟುಕೊಂಡಿದ್ದರು. ರಾಜಕೀಯ ದೃವೀಕರಣ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರು ನಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಸೇರ್ಪಡೆ ವಿಷಯವಾಗಿ ಕಳೆದ ವಾರ ಹಿರಿಯರ ಜೊತೆ ಸಭೆ ನಡೆಸಿ ಮಾತನಾಡಿದ್ದೆವು. ಅಂದು ನಮ್ಮ ಪಕ್ಷಕ್ಕೆ ಬನ್ನಿ ಅಂತ ಅಹ್ವಾನ ಮಾಡಿದ್ದರು. ಅದರಂತೆ ಪಕ್ಷಕ್ಕೆ ಬರಲು ಒಪ್ಪಿದ್ದಾರೆ.
ಇದೇ ಗಾಂಧಿ ಜಯಂತಿ ದಿನ ಮಾಜಿ ಶಾಸಕ ಅಶ್ವಥ್ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಜೆಡಿಎಸ್ನಲ್ಲಿ ಸ್ಥಾನ ಮಾನ ಸಿಗುವುದು ಕಷ್ಟ ಎಂದು ಕಾಂಗ್ರೆಸ್ ಸೇರುತ್ತಿದ್ದಾರೆ. ವಿಧಾನ ಸಭೆ ಚುನಾವಣೆಗೂ ಮೊದಲೇ ಅಹ್ವಾನ ಕೊಟ್ಟಿದ್ದೆ. ಆ ವೇಳೆ ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ ಎಂದಿದ್ದರು. ಆದರೆ ರಾಜಕಾರಣ ಬದಲಾದ ಸಂದರ್ಭದಲ್ಲಿ ಸಹಮತಿಕೊಟ್ಟು ಪಕ್ಷಕ್ಕೆ ಬರುತ್ತಿದ್ದಾರೆ. ಇದೇ ಅ.2 ರಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಕ್ಷ ಸೇರುತ್ತಾರೆ. ಇಲ್ಲಿ ಲಾಭ ನಷ್ಟದ ಪ್ರಶ್ನೆ ಇಲ್ಲ. ಜೆಡಿಎಸ್‌ಗೆ ಕೊನೆಗಾಣಿಸುವ ಎಲ್ಲಾ ಲಕ್ಷಣ ಕೂಡ ಕಾಣಿಸುತ್ತಿದೆ. ಜೆಡಿಎಸ್ ಪಕ್ಷದ ಹಲವು ಮುಖಂಡರು, ನಾಯಕರು ಪ್ರಮಾಣಿಕತೆಯಿಂದ ಕೆಲಸ ಮಾಡಿದ್ರೂ ಅವರಿಗೆ ಬೆಲೆ ಇಲ್ಲ ಅಂತಾ ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.
ಇನ್ನು ಅಲ್ಪಸಂಖ್ಯಾತರ ಬಗ್ಗೆ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಮತದಾರರು ತೀರ್ಪು ನೀಡಿದ್ದಾರೆ. ಅವರ ಮೈತ್ರಿ ಪವಿತ್ರವೋ ಅಪವಿತ್ರವೋ ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರ ಮೇಲೆ ಕೇಸ್‌ಗಳಿವೆ. ಎಲ್ಲಾ ಸಾಕ್ಷಿಗಳು ಮಾಧ್ಯಮದಲ್ಲಿ ಪ್ರಸಾರಗೊಂಡಿವೆ. ಹೀಗಾಗಿ ನಮ್ಮ ಪಕ್ಷಕ್ಕೆ ಬಂದವರಿಗೆ ಆಹ್ವಾನ ನೀಡುತ್ತಿದ್ದೇವೆ ಎಂದರು.
ಕಾವೇರಿ ಹೋರಾಟ ರಾಜಕೀಯ ಪ್ರೇರಿತ:ಇನ್ನು ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಕಾವೇರಿ ನೀರಿಗಾಗಿ 165 ಕಿ.ಮೀ ಪಾದಯಾತ್ರೆಯನ್ನು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದೆವು. ನಮ್ಮ ಉದ್ದೇಶ ಶಾಶ್ವತವಾದ ಪರಿಹಾರ ಕೊಡಬೇಕು ಎಂಬುದಾಗಿತ್ತು. ಮೂರ್ನಾಲ್ಕು ವರ್ಷಕ್ಕೊಮ್ಮೆ ಬರಗಾಲ ಪರಿಸ್ಥಿತಿ ಎದುರಾಗುತ್ತಿದೆ. ಅದಕ್ಕೆ ಮೇಕೆದಾಟು ಯೋಜನೆ ಒಂದೇ ಪರಿಹಾರವಾಗಿದೆ. ನ್ಯಾಯಾಲಯ ಕಾವೇರಿ ವಿಚಾರದಲ್ಲಿ ಸಂಪೂರ್ಣ ತೀರ್ಪು ಕೊಟ್ಟಿದೆ. ನಮಗೆ, ತಮಿಳುನಾಡಿಗೆ ಎಷ್ಟು ನೀರು ಕೊಡಬೇಕು, ಎಷ್ಟು ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಕೊಟ್ಟಿದೆ. ಹೀಗಾಗಿ ಮೇಕೆದಾಟು ಯೋಜನೆ ಆಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯವಾಗಿದ್ದು, ಇದಕ್ಕೆ ಬಿಜೆಪಿ ಸೇರಿದಂತೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಈ ವರ್ಷ ಸಂಕಷ್ಟ ಬಂದಿದೆ. ಹೀಗಾಗಿ ನೀರನ್ನು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ನೀರಿನ ಸದ್ಬಳಕೆ ಜವಾಜ್ದಾರಿ ಕೊಟ್ಟಿದ್ದಾರೆ. ನಮ್ಮ ವಕೀಲರು, ಅಧಿಕಾರಿಗಳು ನಮ್ಮ ಪರವಾಗಿ ವಾದ ಮಾಡುತ್ತಿದ್ದಾರೆ. ಆದರೂ ರಾಜ್ಯದ ರೈತರ ಹಿತಕ್ಕೆ ಧಕ್ಕೆ ಆಗುತ್ತಿದೆ. ಹೀಗಾಗಿ ರಾಜ್ಯದ ಜನ ಪ್ರತಿಭಟಿಸಬೇಕಾಗುತ್ತದೆ, ಪ್ರತಿಭಟಿಸುವುದು ನಮ್ಮೆಲ್ಲರ ಹಕ್ಕು ಆಗಿದೆ. ಪ್ರತಿಭಟನೆಯನ್ನು ನಾನು ಮತ್ತು ಕಾಂಗ್ರೆಸ್ ಸರ್ಕಾರ ಬೆಂಬಲಿಸುತ್ತೇವೆ. ಕೇಂದ್ರ, ರಾಜ್ಯ ಸರ್ಕಾರ ಬಲವಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಂಸದ ಡಿ ಕೆ ಸುರೇಶ್ ಇದೇ ವೇಳೆ ತಿಳಿಸಿದರು.
ಇಲ್ಲಿ ಒಬ್ಬೊಬ್ಬರ ಒತ್ತಾಯ ಒಂದೊಂದು ರೀತಿ ಇದ್ದು, ವರ್ಷದ 365 ದಿನಗಳೂ ಕಾವೇರಿ ನೀರು ಹರಿಯುತ್ತಲೇ ಇರುತ್ತದೆ. ಸಿಎಂ, ಡಿಸಿಎಂ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಲು ಸೂಚನೆ ಕೊಟ್ಟಿದ್ದಾರೆ. ಕಾನೂನಿನ ಹೋರಾಟ ನಡೆಯುತ್ತದೆ. ಆದರೆ ಶಾಶ್ವತ ಹೋರಾಟ ನಾವು ಮಾಡಬೇಕಾಗಿದೆ, ಅದನ್ನು ಮುಂದುವರೆಸೋಣ ಎಂದರು.
ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ ಸಂಸದರು, ಕೇಂದ್ರದ ಮಂತ್ರಿಗಳ ಬಳಿ ಸಿಎಂ, ಡಿಸಿಎಂ ಮಾತನಾಡಿದ್ದಾರೆ. ತಮಿಳುನಾಡು ಪ್ರಶ್ನೆ ಮಾಡಿರುವ ಬಗ್ಗೆ ನ್ಯಾಯಾಲಯದಲ್ಲಿ ವೇಗವಾಗಿ ಕೆಲಸ ಮಾಡಿ ತೀರ್ಮಾನಕ್ಕೆ ಕಾಯಲಾಗುತ್ತಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಮೇಕೆದಾಟು ಅರ್ಜಿ ವಜಾ ಮಾಡುವ ಸಂದರ್ಭದಲ್ಲಿ ಮಾತನಾಡಬಹುದಿತ್ತು. ಈಗಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ಕೊಟ್ಟರೆ ನಮ್ಮ ರಾಜ್ಯಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಕೇಂದ್ರ ಸರ್ಕಾರದ ಕೈಯಲ್ಲಿ ಮೇಕೆದಾಟು ಯೋಜನೆ ಇದ್ದು, ಅಣೆಕಟ್ಟು ಕಟ್ಟಬೇಕಂದ್ರೆ ಪರಿಸರ ಇಲಾಖೆ ಅನುಮೋದನೆಗೆ ಯಾರು ತಡೆದಿಲ್ಲ. ಅದಕ್ಕೆ ಅನುಮೋದನೆ ನೀಡಿದ್ರೆ ಯೋಜನೆ ಮಾಡಬಹುದು. ಹೀಗಾಗಿ ಕರ್ನಾಟಕದ ಪರ ಗಮನ ಹರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಇದನ್ನೂ ಓದಿ:ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ: ಸಿಎಂ ಸಿದ್ದರಾಮಯ್ಯ