ರಾಮನಗರ:ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದು, ದುರ್ಮರಣಕ್ಕೀಡಾದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಗಡಿ ಶಾಸಕ ಮಂಜುನಾಥ್ ಅವರೊಂದಿಗೆ ತೆರಳಿದ ಹೆಚ್ಡಿಕೆ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿಯ ನೆರವಿನ ಚೆಕ್ ಹಸ್ತಾಂತರಿಸಿದರು.
ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮನೆಯವರಿಗೆ ಧೈರ್ಯ ತುಂಬಿದ ಅವರು, ಕುಟುಂಬದ ಸ್ಥಿತಿಗತಿಗಳನ್ನು ಕೇಳಿ ತಿಳಿದು ಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆಯ ದಿನ ಅವಘಡದಲ್ಲಿ ಬೋರೇಗೌಡರು ನಿಧನ ಹೊಂದಿದ್ದರು. ಅವರದ್ದು ಕಷ್ಟಪಟ್ಟು ಜೀವನ ಮಾಡುವ ಕುಟುಂಬ. ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಮ್ಮ ಒಡನಾಟದಲ್ಲಿ ಬೋರೇಗೌಡರು ಇದ್ದರು. ನಮ್ಮ ಜತೆಗೂಡಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ಮಳೆ ಹಾನಿ ಪ್ರದೇಶಕ್ಕೆ ಹೆಚ್ಡಿಕೆ ಭೇಟಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಉತ್ತಮವಾದ ಕೆಲಸ ಏನಾಗಿದೆ ಎಂದು ಬಂದು ನೋಡೋದಕ್ಕೆ ಹೇಳಿ ಎಂದು ಹೈವೇ ಕೆಲಸ ಉತ್ತಮವಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಈ ಹೆದ್ದಾರಿಯಲ್ಲಿ ಇವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರಲ್ಲ. ಇವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡರು. ಬಿಡದಿ ಹತ್ತಿರವೂ ಬಂದು ಅಧಿಕಾರಿಗಳ ಸಭೆ ಮಾಡಿದ್ದರಲ್ಲ. ಇಲ್ಲಿ ಬಂದು ಮಧ್ಯಸ್ಥಿಕೆ ವಹಿಸಿ, ಸ್ಥಳೀಯ ಜನಪ್ರತಿನಿಧಿ ಕಡೆಗಣನೆ ಮಾಡಿ ಇವರೇ ಉಸ್ತುವಾರಿ ವಹಿಸಿಕೊಂಡು ಮಾಡಿದ್ದರು. ಈಗ ಒಮ್ಮೆ ಬಂದು ಹೆದ್ದಾರಿ ನೋಡಲಿ ಎಂದು ಪ್ರತಾಪ್ ಸಿಂಹ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.
ಬೋರೆಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿದ ಹೆಚ್ಡಿಕೆ ಇನ್ನು ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು. ಅವರೇ ಹೈವೆಗೆ ಬಂದಿದ್ದರೆ ಸ್ವಿಮ್ ಮಾಡಲು ಚೆನ್ನಾಗಿ ನೀರು ನಿಂತಿತ್ತು. ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಕಣ್ಣಿದ್ದರೆ ಬಂದು ನೋಡೋದಕ್ಕೆ ಹೇಳಿ ಎಂದು ಹೇಳಿದ್ದಾರೆ.
ಹಾಗೆಯೇ ಕೆರೆ ಒಡೆದಿರೋದರಿಂದ ಈ ರೀತಿ ಆಗಿರೋದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಕೇವಲ ಸರ್ಟಿಫಿಕೇಟ್ ಕೊಡಕ್ಕಲ್ಲ ಇವರು ಇರೋದು. ತಪ್ಪಾಗಿದ್ದರೆ ಸರಿಪಡಿಸಬೇಕು. ಕೆರೆ ಒಡೆದೋಯ್ತು ಅಂತಾ ಹೇಳೋದಕ್ಕಲ್ಲ. ಸಂಸದ ಪ್ರತಾಪ್ ಸಿಂಹ ಪಬ್ಲಿಸಿಟಿ ತಗೊಳೋದು ನಿಲ್ಲಿಸಿ, ಮೊದಲು ಜನರ ಮಧ್ಯ ಹೋಗಿ ಕೆಲಸ ಮಾಡಿ ತೋರಿಸಲಿ ಎಂದು ವಾಗ್ಧಾಳಿ ನಡೆಸಿದ್ದಾರೆ.
ಇದನ್ನೂ ಓದಿ :ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಗೆ ಸಂಪರ್ಕ್ ಕಟ್, ಮನೆಗಳು ಜಲಾವೃತ: ಶಾಲೆಗಳಿಗೆ ರಜೆ ಘೋಷಣೆ