ರಾಮನಗರ:ನಗರದಲ್ಲಿ ಕೊವಿಡ್-19 ಸಂಬಂಧ ಸರ್ವೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ವಿವರ ನೀಡದ ವ್ಯಕ್ತಿಯನ್ನು ಸಮಾಧಾನ ಪಡಿಸಲು ಇಡೀ ಆರೋಗ್ಯ ಇಲಾಖೆಯೇ ದೌಡಾಯಿಸಿದ ಘಟನೆ ನಡೆದಿದೆ.
ಕೊರೊನಾ ಭೀತಿ ಹಿನ್ನೆಲೆ ಮನೆಯ ಎಲ್ಲಾ ಸದಸ್ಯರ ಮಾಹಿತಿ ಕಲೆಹಾಕಲು ಇಲ್ಲಿನ ಆಶಾ ಕಾರ್ಯಕರ್ತೆಯರು ತೆರಳಿದಾಗ ಮಾಹಿತಿ ನೀಡದ ಉದ್ಧಟತನ ತೋರಿದ್ದಾನೆ ಎನ್ನಲಾಗಿದೆ.
ರಾಮನಗರದಲ್ಲಿ ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡದೆ ಉದ್ಧಟತನ ತೋರಿದ ವ್ಯಕ್ತಿ ಇಲ್ಲಿನ ಹಾಜಿನಗರದ ಮನೆಗೆ ಭೇಟಿ ನೀಡಿದಾಗ ಕುಟುಂಬದ ಸದಸ್ಯ ಮಾಹಿತಿ ನೀಡದೆ ಸತಾಯಿಸಿದ್ದಾನೆ. ನೀವು ಗರ್ಬಿಣಿಯರ ಮಾಹಿತಿ ಮಾತ್ರ ಪಡೆದುಕೊಳ್ಳಿ, ಸಂಬಂಧಪಟ್ಟವರನ್ನು ಇಲ್ಲಿಗೆ ಕರೆಸಿ ಮಾತನಾಡುತ್ತೇನೆ ಎಂದೆಲ್ಲಾ ಹೇಳಿ ಕಾರ್ಯಕರ್ತೆಯ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಅಲ್ಲದೆ ಕಾರ್ಯಕರ್ತೆಯೊಬ್ಬರ ಬಳಿ ಇದ್ದ ದಾಖಲೆಯನ್ನು ಹರಿದು ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯ ಒಂದಿಷ್ಟು ಸಿಬ್ಬಂದಿ ಸ್ಥಳಕ್ಕಾಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆಯರು, ಪ್ರತಿ ಮನೆಯ ಸರ್ವೆ ನಡೆಸಲು ಮುಂದಾಗಿದ್ದಾರೆ. ಆದರೆ ಕೆಲವು ಕಡೆ ಇಂತಹ ಘಟನೆಗಳು ನಡೆಯುತ್ತಿವೆ.