ರಾಯಚೂರು:ಜಿಲ್ಲೆಯ ಜೆಡಿಎಸ್‌ನ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯನೋರ್ವ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸಿಂಧನೂರು ತಾಲೂಕಿನ ರಾಗಲಪರ್ವಿ ಜಿ.ಪಂ. ಕ್ಷೇತ್ರದ ಸದಸ್ಯ ಎನ್. ಶಿವನಗೌಡ ಗೊರೇಬಾಳ ಜೆಡಿಎಸ್ ತೊರೆದು ಬಿಜೆಪಿಗೆ ಜೈ ಎಂದಿದ್ದಾರೆ.
ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಎಡದಂಡೆ ನಾಲೆ ನೀರು ಹರಿಸುವ ವಿಚಾರ, ನಗರಸಭೆ ಟಿಕೆಟ್ ಹಂಚಿಕೆ ಸೇರಿದಂತೆ ನಾನಾ ವಿಚಾರಗಳಲ್ಲಿ ನಿರ್ಲಕ್ಷ್ಯ ತೋರಿರುವುದು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರ ನಡೆಗೆ ಬೇಸತ್ತು ಬಿಜೆಪಿ ಸೇರಿರುವುದಾಗಿ ಶಿವನಗೌಡ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಶೀಘ್ರ ರಾಜೀನಾಮೆ ನೀಡಿ, ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಿಂಧನೂರು ಪ್ರಚಾರಕ್ಕೆ ಬಂದ ವೇಳೆ ಅಧಿಕೃತವಾಗಿ ಮತ್ತೊಮ್ಮೆ ಬಿಜೆಪಿ ಸೇರುವುದಾಗಿ ಹೇಳಿದರು. ಸದ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವ ಮೂಲಕ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ಮಧ್ವರಾಜ ಆಚಾರ್, ಕೃಷ್ಣಮೂರ್ತಿ, ಹನುಮಂತಪ್ಪ ನಾಯಕ, ಅಡಿವೆಪ್ಪ ಓತೂರು, ಪ್ರಕಾಶ್ ಹಚ್ಚೊಳ್ಳಿ, ಅಮರೇಶ್ ರೈತನಗರ ಕ್ಯಾಂಪ್, ಸಿದ್ದು, ಪ್ರವೀಣಕುಮಾರ ಜೈನ್, ಅಮರೇಶ ಕಡಬೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.