ರಾಯಚೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಜಿಲ್ಲೆಯ ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಳಗಾವಿಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾಗಿದ್ರೆ, ಸೋನಿಯಾ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರಿಗೆ ಏನು ಅನುಭವವಿದೆ ಎಂದು ಪ್ರಶ್ನಿಸಿದರು.
ಕೈಗೆ ಸೋಲಿನ ಭಯ ಆವರಿಸಿದೆ
ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಅಧ್ಯಕ್ಷ, ಉಪಾಧ್ಯಕ್ಷರು ಬೇಲ್ನಲ್ಲಿ ಯಾಕೆ ಹೊರಗಿದ್ದಾರೆ ಎಂಬುದಕ್ಕೆ ಉತ್ತರ ನೀಡಲಿ. ಬೈ ಎಲೆಕ್ಷನ್ ಸೋಲುವ ಭಯ ಕಾಂಗ್ರೆಸ್ಸಿಗರಿಗೆ ಇದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಲ್ಲಿ ಮ್ಯೂಜಿಕಲ್ ಚೇರ್ ಸ್ಪರ್ಧೆ ಆರಂಭವಾಗಿದೆ..
ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ಇದೆ, ಅಲ್ಲಿ ಮ್ಯೂಜಿಕಲ್ ಚೇರ್ ಸ್ಪರ್ಧೆ ಆರಂಭವಾಗಿದೆ. ಸಿದ್ದರಾಮಯ್ಯರನ್ನ ಹೊರಹಾಕಲು ಎಲ್ಲಾ ನಾಯಕರು ಒಂದಾಗಿದ್ದಾರೆ. ಪ್ರತಾಪ್ ಗೌಡ ಕೇಂದ್ರ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಸಂಘಟನಾತ್ಮಕತೆಯಿಂದ ಗೆಲ್ಲುತ್ತಾರೆ. ನಮ್ಮ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಮೂರು ಕ್ಷೇತ್ರದಲ್ಲೂ ಗೆಲುವಿನ ಫಲಿತಾಂಶ ಬರುತ್ತೆ. ಮೋದಿ ಹಾಗೂ ಯಡಿಯೂರಪ್ಪ ಅವರ ಸಾಧನೆ. ಕೋವಿಡ್ ಸಮಸ್ಯೆ ಮಧ್ಯೆ ಉತ್ತಮ ಬಜೆಟ್ ಕೊಟ್ಟಿದ್ದು ಗೆಲುವು ತಂದುಕೊಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರ ಮೇಲೆ ಕಟೀಲ್ ವಾಗ್ದಾಳಿ 2023ರ ನಂತರ ಸಿದ್ದರಾಮಣ್ಣನ ಅಡ್ರೆಸ್ ಇರಲ್ಲ..
ಸಿದ್ದರಾಮಯ್ಯ ಕಾಲದಲ್ಲಿ ಎಷ್ಟು ಹಗರಣಗಳಾಗಿವೆ. ನಮ್ಮ ಹಣ ಹಂಚಿಕೆ, ಭ್ರಷ್ಟಾಚಾರದ ಬಗ್ಗೆ ದಾಖಲೆ ತೋರಿಸಲಿ. ಅಧಿಕಾರ ಇಲ್ಲದೆ ಇರುವಾಗ ಕುತಂತ್ರ ರಾಜಕಾರಣ ಮಾಡುವುದು ಕಾಂಗ್ರೆಸ್ಗೆ ಹೊಸದಲ್ಲ. 2023ರ ನಂತರ ಸಿದ್ದರಾಮಣ್ಣಗೆ ಅಡ್ರೆಸ್ ಇರಲ್ಲ. ಎಲ್ಲೆಡೆ ಬಿಜೆಪಿ ಗೆಲ್ಲುತ್ತೆ, ಕಾಂಗ್ರೆಸ್ ಮುಕ್ತ ಭಾರತದ ನಿರ್ಮಾಣ ಆಗುತ್ತೆ ಎಂದು ಭವಿಷ್ಯ ನುಡಿದರು.
ಯತ್ನಾಳ್ಗೆ ಈಗಾಗಲೇ ಎಚ್ಚರಿಕೆ ಕೊಡಲಾಗಿದೆ..
ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ಗೆ ಈಗಾಗಲೇ ಎಚ್ಚರಿಕೆ ಕೊಡುವ ಕೆಲಸ ಆಗಿದೆ. ಅವರ ಮಾತನ್ನ ಜನ ನಂಬಲು ಸಿದ್ಧರಿಲ್ಲ. ನಾಯಕತ್ವ ಬದಲಾವಣೆ ಆಗುವುದಿಲ್ಲ. ಶಿಸ್ತಿನ ಕ್ರಮವನ್ನ ತೆಗೆದುಕೊಳ್ಳುತ್ತೇವೆ. ನಮ್ಮ ಅಭ್ಯರ್ಥಿ ಪ್ರತಾಪ್ ಗೌಡರಿಗೆ ಕೊರೊನಾ ಸೊಂಕು ತಗುಲಿರುವುದು ಯಾವುದೇ ಪರಿಣಾಮ ಬೀರಲ್ಲ. ಉಳಿದ ಕಾರ್ಯಕರ್ತರೆಲ್ಲಾ ಕೆಲಸ ಮಾಡುತ್ತಾರೆ ಎಂದರು.
ಸಾಲ ಮಾಡಿ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿದ್ದೇವೆ..
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸಾಲಮಾಡಿ ಸಾರಿಗೆಯಿಂದ ಆದಾಯ ಇಲ್ಲದಿದ್ದರೂ ಸಂಬಳ ಕೊಟ್ಟಿದ್ದೇವೆ. ನೌಕರರು ಇದನ್ನ ನೆನಪು ಮಾಡಿಕೊಳ್ಳಬೇಕು. ಕೋವಿಡ್ ಕಷ್ಟದ ಸಮಯದಲ್ಲಿ ಮುಷ್ಕರ ಮಾಡುವುದು ಸಾರ್ವಜನಿಕರಿಗೆ ಅವಮಾನ ಮಾಡಿದಂತೆ. ಎಲ್ಲಾ ನೌಕರರು ಎರಡು ದಿನದಲ್ಲಿ ಕೆಲಸಕ್ಕೆ ಹಾಜರಾಗುತ್ತಾರೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.
ಮುಷ್ಕರ ಮಾಡಿಸುತ್ತಿರುವವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರೈತ ಮುಖಂಡರ ಮಾತು ಕೇಳಿ ರೈತರಿಗೆ ತೊಂದರೆ ಕೊಡದೆ ಕೆಲಸಕ್ಕೆ ಹಾಜರಾಗಿ. ಹಾಜರಾದ ಬಳಿಕ ಸರ್ಕಾರ ಮಾತುಕತೆಗೆ ಮುಂದಾಗುತ್ತೆ ನಾವು ಯಾವುದೇ ಹಠಮಾರಿ ಧೋರಣೆ ತೋರಲ್ಲ ಎಂದರು.