ರಾಯಚೂರು:ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಸಮಯದಲ್ಲಿ ಪೊಲೀಸರು ಗೋಲಿಬಾರ್ ನಡೆಸುವ ಮೂಲಕ ದಿಟ್ಟ ಕ್ರಮ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಡಿ.ಆರ್. ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರುತ್ತಾರೆ ಎನ್ನುವ ಕಾರಣಕ್ಕೆ ಈ ಗಲಭೆ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಕಾಂಗ್ರೆಸ್ ತನ್ನ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿ ಕಾರ್ಯಕರ್ತ ಎಂದು ಸುಳ್ಳು ಹೇಳುತ್ತಿದೆ ಎಂದರು. ಅಲ್ಲದೆ ಶಾಸಕ ಜಮೀರ್ ಅಹಮದ್ ಗೋಲಿಬಾರ್ನಲ್ಲಿ ಸತ್ತವರು ಮುಗ್ಧರು ಎಂದು ಹೇಳುತ್ತಿದ್ದು, ಮುಗ್ಧರು ಮಧ್ಯರಾತ್ರಿ ಹೊರಗೆ ಬರುತ್ತಾರಾ? ಗಲಭೆ ವೇಳೆ ಇರುತ್ತಾರಾ? ಎಂದು ಪ್ರಶ್ನಿಸಿದರು.
ಬರುವ ಮೂರು ವರ್ಷದ ಅವಧಿಗೆ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ನಾನು ಸಿಎಂ ಆಕಾಂಕ್ಷಿಯಲ್ಲ. ನನಗೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ತೃಪ್ತಿಯಿದೆ. ನಾನು ನನ್ನ ಇಲಾಖೆಯ ಕೆಲಸಕ್ಕೆ ದೆಹಲಿ ತೆರಳಿದ್ದೆ. ಆದ್ರೆ ಅದಕ್ಕೆ ರೆಕ್ಕೆಪುಕ್ಕ ನೀಡಿ ಕಾಗೆ ಹಾರಿಸಲಾಗಿದೆ ಎಂದರು.
ಕೊರೊನಾ ಸೋಂಕಿನಿಂದ ರಾಜ್ಯದ ಬೇರೆ ಇಲಾಖೆಗಳಂತೆ ಸಾರಿಗೆ ಇಲಾಖೆಗೆ ಅಂದಾಜು 2,760 ಕೋಟಿ ರೂ. ನಷ್ಟವುಂಟಾಗಿದೆ. ಆದರೂ ಸಾರ್ವಜನಿಕರ ಸೇವೆಗೆ ಬಸ್ಗಳನ್ನು ಓಡಿಸಲಾಗುತ್ತಿದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮದಲ್ಲಿ ಪ್ರತಿನಿತ್ಯ ಒಂದು ಕೋಟಿ ಜನ ಸಂಚರಿಸುತ್ತಿದ್ದರು. ಕೋವಿಡ್ ಭೀತಿಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಆರಂಭಿಸಲಾಗಿದ್ದರೂ ಕೇವಲ 31 ಲಕ್ಷ ಜನರು ಮಾತ್ರ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಇನ್ನುಳಿದ 69 ಲಕ್ಷ ಜನ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.