ರಾಯಚೂರು: ಕಾಂಗ್ರೆಸ್ ಪಕ್ಷದ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿರುವ ಮಾತು ಸತ್ಯ ಎಂದು ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬರೋದಕ್ಕೆ ರಮೇಶ್ ಜಾರಕಿಹೊಳಿಯವರು ಪ್ರಮುಖರಾಗಿದ್ದಾರೆ. ತುಂಬಾ ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸಹಜವಾಗಿಯೇ ಆ ಪಕ್ಷದಲ್ಲಿದ್ದವರು ಅವರಿಗೆ ಸಂಪರ್ಕದಲ್ಲಿದ್ದಾರೆ. ನನ್ನ ಕ್ಷೇತ್ರ ಹಾಗೂ ಜಾರಕೊಹೊಳಿ ಅವರ ಕ್ಷೇತ್ರ ಅಕ್ಕಪಕ್ಕದಲ್ಲಿವೆ. ಕಳೆದ 25 ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹೀಗಾಗಿ ಅವರು ಹೇಳಿದ ಮಾತು ಸತ್ಯವಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ್ ಬಿ. ಪಾಟೀಲ್ ಕಾಂಗ್ರೆಸ್ನವರು ಮಹದಾಯಿ ಹಾಗೂ ಕಳಸಾ ಬಂಡೂರಿ ಪಾದಯಾತ್ರೆ ವಿಚಾರದ ಕುರಿತು ಮೊದಲು ಸೋನಿಯಾ ಗಾಂಧಿ ಅವರ ಅಭಿಪ್ರಾಯ ತಿಳಿದುಕೊಂಡು ಮಾತನಾಡಲಿ. ಸೋನಿಯಾ ಗಾಂಧಿ ಗೋವಾದ ಚುನಾವಣೆಯಲ್ಲಿ ನೀರು ಕೊಡಲ್ಲ ಅಂತಾ ಹೇಳಿದ್ದಾರೆ. ಕಳಸಾ ಬಂಡೂರಿ ಹಾಗೂ ಮಹದಾಯಿಗೆ ಒಂದು ಹನಿ ನೀರು ಕೊಡಲ್ಲ ಎಂದಿದ್ದಾರೆ. ಪಾದಯಾತ್ರೆಗೂ ಮುಂಚೆ ಅವರ ವರಿಷ್ಠರನ್ನ ಕೇಳಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಮೇಕೆದಾಟು ಪಾದಯಾತ್ರೆ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟದಲ್ಲೇ ಪಾದಯಾತ್ರೆಗೆ ಮುಂದಾದಾಗ ಕೋರ್ಟ್ ಛೀಮಾರಿ ಹಾಕಿದೆ ಎಂದರು. ಬಿಜೆಪಿ ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಅನ್ನೋದು ಕಾಂಗ್ರೆಸ್ನವರ ರಾಜಕೀಯ ಹೇಳಿಕೆಯಾಗಿದೆ.
ನಾವು ಅಧಿಕಾರಕ್ಕೆ ಬರಬೇಕು ಅನ್ನೋ ಉತ್ಸಾಹದಲ್ಲಿ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಚುನಾವಣೆ ಮುಂದಿಟ್ಟುಕೊಂಡು ಅಧಿಕಾರದ ಆಸೆಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಇದು ಶೋಭೆ ತರುವಂತಹದ್ದಲ್ಲ. ಈಗಾಗಲೇ ಕಾಂಗ್ರೆಸ್ ನಿಂದ ಗೆದ್ದ ಶಾಸಕರು, ಸಚಿವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ.
ಕಾಂಗ್ರೆಸ್ ನಿಂದ ಬಂದವರು ಮತ್ತೆ ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋದು ಕೇವಲ ರಾಜಕೀಯ ಹೇಳಿಕೆ, ಅದಕ್ಕೆ ಅರ್ಥವಿಲ್ಲ. ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಆರಂಭವಾಗಿಲ್ಲ. ನಮ್ಮಲ್ಲಿ ಹಿರಿಯರು, ಅನುಭವಿಗಳಿದ್ದಾರೆ. ನಮ್ಮ ಹೈಕಮಾಂಡ್ , ರಾಜ್ಯಾಧ್ಯಕ್ಷರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ