ರಾಯಚೂರು: ಕೊರೊನಾ ರೋಗಿಗಳಿಗೆ ಅವಶ್ಯಕವಾಗಿರುವ ರೆಮ್ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ರಾಯಚೂರಿನಲ್ಲಿ ರೆಮ್ಡಿಸಿವಿರ್ ಅಕ್ರಮ ಸಾಗಾಟ: ಆ್ಯಂಬುಲೆನ್ಸ್ ಚಾಲಕನನ್ನು ಹಿಡಿದ ರೋಗಿ ಸಂಬಂಧಿಗಳು
ಕೊರೊನಾ ರೋಗಿಗಳಿಗಾಗಿ ಬಳಸಲಾಗುತ್ತಿರುವ ರೆಮ್ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನನ್ನು ರೋಗಿಗಳ ಸಂಬಂಧಿಕರು ಹಿಡಿದು ತಪಾಸಣೆ ನಡೆಸಿರುವ ಘಟನೆ ರಾಯಚೂರಿನ ಓಪಕ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ.
ಸರ್ಕಾರದಿಂದ ಓಪೆಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಕೊರೊನಾ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲ ದಿನಗಳಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಿಮ್ಸ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ ಚಾಲಕ ಬೆಳಗಿನ ಜಾವ 4:30ರ ಸುಮಾರಿಗೆ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಸಾಗಾಣಿಕೆ ಮಾಡುತ್ತಿದ್ದ.
ಈ ಸಮಯದಲ್ಲಿ ಆಸ್ಪತ್ರೆಯ ಆವರಣದಲ್ಲಿದ್ದ ರೋಗಿಗಳ ಸಂಬಂಧಿಕರು ಅನುಮಾನಗೊಂಡು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ನೀಡಬೇಕಾದ ಔಷಧಿ ಲಭ್ಯವಿಲ್ಲ ಎನ್ನುವ ಮಾತುಗಳಿವೆ. ಇದರ ನಡುವೆ ಬಡವರಿಗೆ ಸೇರಬೇಕಾಗಿದ್ದ ಔಷಧಿ ಉಳ್ಳವರ ಪಾಲಾಗುತ್ತಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವಿದೆ ಎನ್ನುವ ಅನುಮಾನ ಹುಟ್ಟು ಹಾಕಿದೆ.