ರಾಯಚೂರು :ಸರಕಾರಿ ಶಾಲೆಯ ಪಕ್ಕದಲ್ಲಿ ಯಾವುದೇ ಖಾಸಗಿ ಶಾಲೆ ಇರಕೂಡದು ಎಂಬ ನಿಯಮವಿದ್ದರೂ ಕೂಡ ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬಸವೇಶ್ವರ ವಿದ್ಯಾಸಂಸ್ಥೆ ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದೆ ಇದನ್ನು ಪ್ರಶ್ನಿಸಬೇಕಾದ ಶಿಕ್ಷಣ ಇಲಾಖೆ ನಿದ್ರೆಗೆ ಜಾರಿದೆ ಎಂಬ ಆರೋಪ ಕೇಳಿ ಬಂದಿದೆ.
ತರಕಾರಿ ಮಾರುಕಟ್ಟೆ ಜಾಗದಲ್ಲಿ ಸರಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ 1982-83ರಲ್ಲಿ ಪ್ರಾರಂಭವಾಗಿದ್ದು 1987-88ರಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಿದೆ. ಅಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳ ಪರಿಶೀಲನೆ ಮಾಡದೇ ಶಾಲೆಗೆ ಅನುಮತಿ ನೀಡಿದ್ದಾರೆ. ಈ ಕುರಿತು ದಾಖಲೆ ಸಮೇತ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ತಂದೆ ಬಸನಗೌಡ ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಶಿಕ್ಷಣ ಇಲಾಖೆ ನಿಯಮ ಉಲ್ಲಂಘಿಸಿ ಶಾಲೆ ನಿರ್ಮಾಣ ಆರೋಪ
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ 12-11-1994 ರಲ್ಲಿ ನಿಯಮ ಬಾಹಿರವಾಗಿ ಮಂಡಳ ಪಂಚಾಯತಿಯಿಂದ ಮೊದಲನೆ ಮಹಡಿಗೆ ಅನುಮತಿ ಪಡೆದು ಸಣ್ಣ ಶಾಲೆ ಅರಂಭ ಮಾಡಿ ಕಾಲಕ್ರಮೇಣ ಬೃಹತ್ ಮಟ್ಟದ ಪ್ರೌಢಶಾಲೆಯಾಗಿ ನಿರ್ಮಾಣ ಮಾಡುವ ಮೂಲಕ ಸರಕಾರದಿಂದ ಸಹಾಯಧನವೂ ಪಡೆದು ಸರಕಾರಕ್ಕೆ ಮಣ್ಣೆರುಚುತ್ತಿದೆ ಎಂದು ದೂರಿದರು.
09-11- 1987 ರಲ್ಲಿ ಸರಕಾರಿ ಶಾಲೆಯ ಅಂದಿನ ಮುಖ್ಯೋಪಾಧ್ಯಾಯ ಮಂಡಳಿ ಪಂಚಾಯತಿಯ ಕಾರ್ಯದರ್ಶಿಗಳಿಗೆ ಪತ್ರ ಬರೆದಾಗ, ಬಸವೇಶ್ವರ ವಿದ್ಯಾಸಂಸ್ಥೆ ತಾತ್ಕಾಲಿಕವಾಗಿ ಟೀನ್ಶೆಡ್ ಹಾಕಿಕೊಂಡು ನಂತರ ಸ್ಥಳಾಂತರ ಮಾಡುವುದಾಗಿ ಹೇಳಿತ್ತು.ಕೂಡಲೇ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಆರಂಭದ ಹಂತದಿಂದ ಈವರೆಗಿನ ಬೆಳವಣಿಗೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.