ರಾಯಚೂರು: ನಗರದ ಹೊರವಲಯದ ಯರಮರಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಐಐಟಿ ತರಗತಿಗಳನ್ನು ಮುಂದಿನ ತಿಂಗಳಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ಕೈಗೊಂಡಿರುವ ಅಗತ್ಯ ಸಿದ್ಧತೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಐಐಐಟಿ ತರಗತಿ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಸೂಚನೆ
ಐಐಟಿ ತರಗತಿಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ರಾಯಚೂರು ನಗರದ ಯರಮರಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಕಾಲೇಜಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತರಗತಿಯ ಪ್ರತಿ ಕೋಣೆಯಲ್ಲೂ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ಕ್ಯಾಂಪಸ್ ಹೊರಗಡೆ ಐಐಐಟಿ ಬೋರ್ಡ್ ಹಾಗೂ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ, ವಿದ್ಯುತ್ ಸ್ಥಗಿತ ಸಂದರ್ಭದಲ್ಲಿ ಯುಪಿಎಸ್ ಅಳವಡಿಸುವಂತೆ ಸೂಚಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು. 40 ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ, ಟಿವಿ, ಕ್ರೀಡಾಂಗಣ ನಿರ್ಮಾಣ, ಕ್ಯಾಂಪಸ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ರಸ್ತೆ ನಿರ್ಮಿಸುವ ಮುನ್ನಾ ಯುಜಿಡಿ ಕಾಮಗಾರಿ ನಿರ್ವಹಿಸಬೇಕು ಎಂದರು.