ರಾಯಚೂರು:ಜಿಲ್ಲೆಯಲ್ಲಿಇಂದು ಐವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬಂದಿದ್ದ ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿದೆ. ಇವರನ್ನು ದೇವದುರ್ಗ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಗಂಟಲು ದ್ರವದ ವರದಿ ಬಂದಿದ್ದು, ಐವರಲ್ಲಿ ಸೋಂಕು ಇರುವುದರಿಂದ ಐಸೋಲೇಷನ್ಗೆ ದಾಖಲಿಸಲಾಗಿದೆ ಎಂದರು.
ಸೋಂಕಿತರ ಜತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೋಂಕಿತ ಎಲ್ಲರೂ ದೇವದುರ್ಗ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದರು.
ಕೊಪ್ಪಳದ ಮೂಲದ ಮಸ್ಕಿಯ ಕೆನರಾ ಬ್ಯಾಂಕ್ ನೌಕರರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅನ್ನು ಸೀಲ್ಡೌನ್ ಮಾಡಲಾಗಿದೆ. ಬ್ಯಾಂಕ್ ಸುತ್ತ 50 ಮೀಟರ್ವರೆಗೆ ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ. ಅವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸುಮಾರು 33 ಜನರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಇವರಿಗೆ ಸೋಂಕು ಹೇಗೆ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಬ್ಯಾಂಕ್ನಲ್ಲಿ ಕೃಷಿ ಸಾಲ ನೀಡುವ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಮಸ್ಕಿಯ ಎರಡ್ಮೂರು ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಆದರೆ, ಅವರಿಗೆ ಸೋಂಕು ಹರಡಿದೆ ಎಂಬುವುದು ಪತ್ತೆಯಾಗಿಲ್ಲ ಎಂದರು.
ತಾಲೂಕಿನ ಮಲಿಯಾಬಾದ್ ಗ್ರಾಮದ 2 ವರ್ಷದ ಮಗುವಿಗೆ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಇರುವವರ ಕೋವಿಡ್ ಪರೀಕ್ಷೆ ವರದಿ ನೆಗಟಿವ್ ಎಂದು ಬಂದಿದೆ. ಆದರೂ ಅವರ ಮೇಲೆ ನಿಗಾವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.