ರಾಯಚೂರು:ದೇಶವನ್ನೇ ತಲ್ಲಣಗೊಳಿಸಿದ ರಾಯಚೂರು ಎಂಜಿಯರಿಂಗ್ ವಿದ್ಯಾರ್ಥಿನಿಯ ನಿಗೂಢ ಸಾವಿನ ಪ್ರಕರಣ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಚಪ್ಪಲಿ, ನೀರಿನ ಬಾಟಲಿ, ಪ್ಯಾಕೆಟ್, ಕಲ್ಲು ತೂರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪರಿಸ್ಥಿತಿಯನ್ನ ನಿಭಾಹಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ವಿಶ್ವಕರ್ಮ ಸಮಾಜ, ಪ್ರಗತಿಪರ ಸಂಘಟನೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸ್ಯಾಂಡಲ್ವುಡ್ ನಟ-ನಟಿಯರು ಜಸ್ಟಿಸ್ ಫಾರ್ ಎಂಜಿಯರಿಂಗ್ ಸ್ಟುಡೆಂಟ್ ಎಂಬ ಅಭಿಯಾನ ಆರಂಭಿಸಿದ್ದು ಇಂದು ನಗರದ ಮಾಣಿಕ್ಯ ಪ್ರಭು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ಮಾರ್ಗ ಮಧ್ಯ ಮಾರುತಿ ಬಡಿಗೇರ್ ಎಂಬಾತ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಸ್ವಸ್ಥಗೊಂಡನು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡರು. ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳುತ್ತಿದ್ದಾಗ ಇವರನ್ನು ತಡದ ಪೊಲೀಸರ ಕ್ರಮ ಖಂಡಿಸಿ ನೀರು ಮತ್ತು ಬಾಟೇಲ್ಗಳು, ಚಪ್ಪಲಿ ತೂರಾಟ ನಡೆಸಿದರು. ಇನ್ನು ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಸಹ ನಡೆಸಿದರು. ಈ ವೇಳೆ ಪರಿಸ್ಥಿತಿಯನ್ನ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.