ರಾಯಚೂರು:ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸಿಂಧನೂರು ತಾಲೂಕಿನ ಗದ್ರಟಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಸುರೇಶ ಜಾಡರ್ (57) ಮೃತರು.
ಶಾಲೆಯಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಕಚೇರಿ ಕುರ್ಚಿಯ ಮೇಲೆ ಸುರೇಶ ಜಾಡರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಸಹ ಶಿಕ್ಷಕರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ ಆಗಮಿಸಿದ್ದರು. ಮೃತದೇಹವನ್ನು ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂಲತಃ ರಾಣೆಬೆನ್ನೂರು ತಾಲೂಕಿನವರಾಗಿರುವ ಸುರೇಶ ಜಾಡರ್, ಕಳೆದ 3 ವರ್ಷಗಳಿಂದ ಸಿಂಧನೂರಿನ ಗದ್ರಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಶಿಕ್ಷಕ ಸುರೇಶ್ ನಿಧನಕ್ಕೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ನೋಟಿಸ್ ಅಂಟಿಸಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ: ಕಾನ್ಸ್ಟೇಬಲ್ ಸಾವು, ಗುಂಡು ಹಾರಿಸಿದ ತಂದೆ, ಪುತ್ರನ ಬಂಧನ