ರಾಯಚೂರು: ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕು ಅಂತ ಎಲ್ಲಿಯೂ ಹೇಳಿಲ್ಲ. ಅವರೂ ಸಹ ಕೇಳಿಲ್ಲ. ಆದ್ರೂ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೆ ಈ ಮೀಸಲಾತಿಯೂ ಇರುತ್ತದೆ. ಬಿಜೆಪಿಯವರು ಮೀಸಲಾತಿ ಅಪ್ರಸ್ತುತಗೊಳಿಸಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಗಿನೆಲೆ ಪೀಠದಲ್ಲಿ ಆಯೋಜಿಸಿದ್ದ ಹಾಲುಮತ ವೈಭವೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಕೊಟ್ಟಿದ್ದಾರೆ. ಇದೇ ವೇಳೆ ಈಗ ಎಲ್ಲವನ್ನೂ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಔಟ್ಸೋರ್ಸ್ನಲ್ಲಿ ನೇಮಕಾತಿ ಮಾಡಲು ಆರಂಭಿಸಿದ್ದಾರೆ. ಹಿಂದುಳಿದ ಜನರಲ್ಲಿ ಈ ಜಾಗೃತಿ ಬರದೇ ಹೋದರೆ, ನಿಮಗೆ ಆಗುತ್ತಿರುವ ಅನ್ಯಾಯ ಅರ್ಥವಾಗುವುದಿಲ್ಲ. ಬಹುಸಂಖ್ಯಾತರಾದ ಹಿಂದುಳಿದವರು, ದಲಿತರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ಹೇಳಿದರು.
ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ:ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಇದ್ದರೂ ಕೂಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲು ಸಾಧ್ಯವಾಗಿಲ್ಲ. ಹೋರಾಟದ ಹೆಸರಿನಲ್ಲಿ ಡೋಂಗಿತನ ಪ್ರದರ್ಶಿಸಿ, ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಕುರುಬ ಸಮುದಾಯವನ್ನು ಸಂತಸಪಡಿಸಲು ಎಸ್ಟಿಗೆ ಸೇರಿಸುತ್ತೇವೆ ಅಂತಾರೆ. ಈಶ್ವರಪ್ಪ ಅವರಿಗೆ ಧಮ್ ಇಲ್ಲ. ತಾಕತಿದ್ದರೆ ಕುರುಬರಿಗೆ ಎಸ್‌ಟಿ ಮೀಸಲು ಒದಗಿಸಲಿ ನಾನೂ ಸಂತೋಷ ಪಡುತ್ತೇನೆ ಎಂದರು.