ರಾಯಚೂರು: ಕ್ಷುಲ್ಲಕ ಕಾರಣಕ್ಕಾಗಿ ತಂದೆ ಹಾಗೂ ಮಕ್ಕಳಿಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಸಿರವಾರ ತಾಲೂಕಿನ ಲಕ್ಕಂದಿನ್ನಿ ಗ್ರಾಮದ ಮುದುಕಪ್ಪ (60), ಶಿವು ಮುದುಕಪ್ಪ (23), ಬಸವರಾಜ ಮುದುಕಪ್ಪ (20) ಎಂದು ಗುರುತಿಸಲಾಗಿದೆ. ಸಿರವಾರ ಪಟ್ಟಣದ ನಿವಾಸಿ ಶಿವುಕುಮಾರ ಎನ್ನುವ ಜಮೀನು ಸರ್ವೆ ನಂಬರ್ 69ರಲ್ಲಿ ನಿರ್ಮಿಸಲಾಗಿರುವ ಕೆರೆಯಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮುದುಕಪ್ಪ ಎನ್ನುವವರಿಗೆ ಇಬ್ಬರು ಮಕ್ಕಳಿದ್ದರು. ಇದರಲ್ಲಿ ಕಿರಿಯ ಮಗ ಬಸವರಾಜ ಕೆಲ ತಿಂಗಳ ಹಿಂದೆ ಮಾಯಮ್ಮ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ, ಇಂದು ಹಣದ ವಿಚಾರವಾಗಿ ಕಿರಿಯ ಮಗ ಬಸವರಾಜ ಹಾಗೂ ತಂದೆ ಮುದುಕಪ್ಪ ನಡುವೆ ಜಗಳವಾಗಿದೆ. ಆಗ ಸೊಸೆ ಮಾಯಮ್ಮ ಕೆರೆಗೆ ಹಾರಿದ್ದಾರೆ. ಈ ವೇಳೆ ಮುದುಕಪ್ಪ ಸೊಸೆಯನ್ನು ರಕ್ಷಿಸಿದ್ದಾನೆ. ಆದರೆ ಇತ್ತ ಇಬ್ಬರು ಮಕ್ಕಳು ಪರಸ್ಪರ ಜಗಳವಾಡುತ್ತ ಕರೆಯಲ್ಲಿ ಬಿದ್ದಿದ್ದಾರೆ.
ಆದರೆ ಇಬ್ಬರಿಗೂ ಈಜು ಬರುವುದಿಲ್ಲ, ಆಗ ಮತ್ತೆ ಮಕ್ಕಳ ರಕ್ಷಣೆ ಮಾಡಲು ತಂದೆ ಮುದುಕಪ್ಪ ಕರೆಗೆ ಹಾರಿ ರಕ್ಷಣೆ ಮುಂದಾದಾಗ ಕೆರೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ತಿಳಿದ ಅರಕೇರಾ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಶವಗಳನ್ನು ಹೊರ ತೆಗೆದಿದ್ದಾರೆ. ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧಿಸಿದ್ದಂತೆ ಸಿರವಾರ ಪೊಲೀಸ್ ಠಾಣೆ ದೂರವಾಣಿ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೂ ಕರೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಯವರನ್ನು ಸಂಪರ್ಕಿಸಿದ್ದು, ಈ ಘಟನೆ ಬಗ್ಗೆ ಮಾಹಿತಿ, ತಿಳಿದುಕೊಂಡು ಮಾಹಿತಿ ನೀಡುವುದಾಗಿ ಹೇಳಿದರು.
ಒಂದೇ ಕುಟುಂಬದ 6 ಮಂದಿ ನೀರು ಪಾಲು: ಇತ್ತೀಚಿಗೆ ಗುಜರಾತ್ ರಾಜ್ಯದವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಗಂಧರ್ ಕರಾವಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಆರು ಮಂದಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ ಕುಟುಂಬ ಸದಸ್ಯರು ನೀರಿನಲ್ಲಿ ಮುಳುಗಿದ್ದಾರೆ. ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದ 6 ಮಂದಿ ನೀರು ಪಾಲಾಗಿದ್ದರು.
ನದಿಗೆ ಜಾರಿ ಬಿದ್ದು ಬಿಜೆಪಿ ಮುಖಂಡ ಸಾವು: ನೀರು ಬಿಡುವ ಪಂಪ್ನ ಫುಟ್‌ವಾಲ್ವೂ ಸರಿ ಪಡಿಸಲು ನದಿಗೆ ಇಳಿದಿದ್ದಾಗ, ಕಾಲು ಜಾರಿ ನೀರಲ್ಲಿ ಮುಳುಗಿ ಬಿಜೆಪಿ ಪಕ್ಷದ ಪ್ರಭಾವಿ ನಾಯಕರೊಬ್ಬರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ನದಿಗೆ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮೇ 18 ರಂದು ನಡೆದಿತ್ತು.
ಇದನ್ನೂ ಓದಿ:ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು.. ಅಡ್ಡಾದಿಡ್ಡಿ ಕಾರ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ