ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮದಲ್ಲಿ ಲಘು ಭೂಕಂಪನ ಸಂಭವಿಸಿದೆ. ಹಟ್ಟಿ ಹಾಗೂ ಸುತ್ತಲು ಬರುವ ಗೆಜ್ಜಲಗಟ್ಟಾ, ವೀರಾಪುರ, ನಿಲೋಗಲ್ ಕಡೆಗಳಲ್ಲಿ ಭೂಮಿ ಕಂಪಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 23ರ ಬೆಳಗ್ಗೆ 2 ಗಂಟೆ 51 ನಿಮಿಷ 14 ಸೆಕೆಂಡ್ ಭೂಕಂಪನ ಉಂಟಾಗಿದ್ದು, ಕಂಪನದ ತೀವ್ರತೆ 2.7ರಷ್ಟು ಇತ್ತು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. ಭೂಮಿಯ 5 ಕಿಲೋ ಮೀಟರ್ ಒಳಗಡೆ ಈ ಕಂಪನವಾಗಿದ್ದು, ಹಟ್ಟಿ ಗೆಜ್ಜಲಗಟ್ಟಾ, ವೀರಾಪುರ, ನಿಲೋಗಲ್ ಗ್ರಾಮದಲ್ಲಿ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.
ಕಡಿಮೆ ಪ್ರಮಾಣದಲ್ಲಿ ಲಘು ಭೂಕಂಪನವಾಗಿದ್ದು, ಇದರ ಅನುಭವ ಜನರಿಗೆ ಕಂಡುಬಂದಿಲ್ಲ. ಅಲ್ಲದೇ, ಈಗ ಸಂಭವಿಸಿರುವ ಭೂಕಂಪನದ ಪ್ರಮಾಣ ಯಾವುದೇ ಪರಿಣಾಮ ಬೀರಲ್ಲ ಎನ್ನುವ ಮಾತುಗಳಿದೆ. ಆದರೆ, ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದ ಕಿಶ್ತ್ವಾರ್, ಮ್ಯಾನ್ಮಾರ್ನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ಪ್ರತ್ಯೇಕ ಘಟನೆ- ಮಳೆ ನಡುವೆ ಭೂಕಂಪನ: ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ನಡುವೆ ಭೂಕಂಪನದ ಅನುಭವವಾಗಿತ್ತು. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಜುಲೈ 25ರಂದು ಬೆಳಗ್ಗೆ 9-55ಕ್ಕೆ ಭೂಮಿ ನಡುಗಿತ್ತು. ಜಿಟಿ ಜಿಟಿ ಮಳೆ ನಡುವೆ ಭೂಕಂಪನವಾಗಿದ್ದು, ಜನರು ಭಯಭೀತರಾಗಿದ್ದರು. ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಭೂಕಂಪನದ ಅನುಭವವಾಗಿರಬಹುದು ಎಂದು ತಜ್ಞರು ತಿಳಿಸಿದ್ದರು.
ರಿಕ್ಟರ್ ಮಾಪಕದಲ್ಲಿ 2.4ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನ ಹಾಗೂ ಜಿಟಿ ಜಿಟಿ ಮಳೆಯಿಂದ ಮಣ್ಣಿನ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದವು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಜಿಲ್ಲಾಡಳಿತ ಭೂಕಂಪನ ಮಾಪನ ತಜ್ಞರನ್ನು ಕರೆಯಿಸಿ ಪರಿಶೀಲನೆ ಸಹ ನಡೆಸಿತ್ತು. 'ಆಲಮಟ್ಟಿ ಜಲಾಶಯ ಇರುವ ಕಾರಣ ಅಂತರ್ಜಲ ಹೆಚ್ಚಾದಾಗ ಭೂಮಿ ಕಂಪಿಸುವುದು ಸಹಜವಾಗಿರುತ್ತದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಭೂಕಂಪನ ಆಗುವುದಿಲ್ಲ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ' ಎಂದು ಜನರಿಗೆ ಧೈರ್ಯ ತುಂಬಿದ್ದರು.
ನಾಲ್ಕು ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭೂಕಂಪನದ ಅನುಭವವಾಗುತ್ತಿದೆ. ಜಿಲ್ಲೆ ಬಯಲು ಪ್ರದೇಶವಾಗಿದ್ದರೂ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಒಣ ಪ್ರದೇಶದಲ್ಲಿ ನೀರು ನುಗ್ಗಿ, ಕಲ್ಲಿನ ಪದರಗಳು ಅಲುಗಾಡುತ್ತವೆ. ಇದರಿಂದ ದೊಡ್ಡ ಶಬ್ದ ಮತ್ತು ಕಂಪನ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿಯ ಲಘು ಭೂಕಂಪನ ಸಾಮಾನ್ಯ. ಇದಕ್ಕೆ ಜನರು ಹೆದರುವ ಅಗತ್ಯವಿಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಈ ಹಿಂದೆ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ.. ನಲುಗಿದ ಕಠ್ಮಂಡು