ರಾಯಚೂರು:ವೈದ್ಯರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಬಿ ಎಸ್ ಲೋಕೇಶ್ ಕುಮಾರ ತಿಳಿಸಿದ್ದಾರೆ. ಕಲಬುರಗಿ ಮೂಲದ ಶರ್ಫುದ್ದೀನ್ ಮಿಸ್ಟರಿ ಹಾಗೂ ಎಂ ಡಿ ಕಮ್‌ರುದ್ದೀನ್ ಬಂಧಿತ ಆರೋಪಿಗಳು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಗೋಷ್ಟಿ ನಡೆಸಿದ ಮಾತನಾಡಿದ ಐಜಿಪಿ ಬಿ.ಎಸ್ ಲೋಕೇಶ್ 'ಕಳೆದ ಆ.31ರಂದು ರಾಯಚೂರು ತಾಲೂಕಿನ ಸಾಥ್‌ಮೈಲ್ ಕ್ರಾಸ್ ಬಳಿ ಬೈಕ್ ಮೇಲೆ ಬಂದ ಅಪರಿಚಿತರಿಬ್ಬರು ನಗರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಜಯಪ್ರಕಾಶ್ ಪಾಟೀಲ್ ಅವರ ಕಾರಿನ ಮೇಲೆ ಪಿಸ್ತೂಲ್‌ನಿಂದ ಫೈರಿಂಗ್ ಮಾಡಿ ಪರಾರಿಯಾಗಿದ್ದರು. ಆದರೆ ಅದೃಷ್ಟವಶಾತ್ ಕಾರಿನ ಬಾನೆಟ್‌ಗೆ ಗುಂಡು ತಗುಲಿದ್ದು, ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದರು. ಈ ತಂಡಗಳ ಯಶಸ್ವಿ ಕಾರ್ಯಾಚರಣೆಯಿಂದ ಆರೋಪಿಗಳನ್ನು ಮೂರು ದಿನಗಳಲ್ಲಿ ಬಂಧಿಸಿಲಾಗಿದೆ' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ರಾಯಚೂರು ಬಳಿ ವೈದ್ಯನ ಕಾರಿನ ಮೇಲೆ ಗುಂಡಿನ ದಾಳಿ!
ಪ್ರಕರಣದ ವಿವರ:ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ವೈದ್ಯರು ಯಾರಿದ್ದಾರೆ? ಎಂದು ತಿಳಿದುಕೊಂಡಿದ್ದರು. ನಂತರ ಅವರಿಗೆ ವೈದ್ಯ ಜಯಪ್ರಕಾಶ್ ಪಾಟೀಲ್ ಅವರ ಚೀಟಿ ಸಿಕ್ಕಿದೆ. ಅದರಲ್ಲಿ ಅವರ ಫೋನ್ ನಂಬರ್ ನೋಡಿಕೊಂಡಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಅವರು ಹಣ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೇ ಈ ಬಗ್ಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಆದರೆ ಆರೋಪಿಗಳು ಆ.31ರಂದು ಗುರುವಾರ ಮಾನ್ವಿಯಲ್ಲಿರುವ ಕ್ಲಿನಿಕ್‌ಗೆ ಹೋಗುವಾಗ ಗುಂಡು ಹಾರಿಸಿ ಪರಾರಿಯಾಗಿದ್ದರು.