ರಾಯಚೂರು:ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಆಗಬೇಕೆಂಬುದು ಬಹುದಿನಗಳ ಕನಸಾಗಿದೆ. ''ಜಿಲ್ಲೆಯಲ್ಲಿ ಏಮ್ಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನ್ಯಾಯ ಸಮ್ಮತವಾಗಿ ಸ್ಥಾಪನೆಯಾಗಬೇಕು'' ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಒತ್ತಾಯಿಸಿದರು.
ನಗರದ ಕೃಷಿ ವಿವಿ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ''ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆ ಹಾಗೂ ರಾಯಚೂರು ಜಿಲ್ಲೆಗಳನ್ನು ಹಿಂದುಳಿದ ಪ್ರದೇಶವಾಗಿದ್ದು, ಇದನ್ನು ಹೈದರಾಬಾದ್- ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿರುವುದಕ್ಕೆ ಖುಷಿಯಿದೆ. ಕಲ್ಯಾಣ ಕರ್ನಾಟಕ ಹೆಸರನ್ನು ಮರುನಾಮಕರಣ ಮಾಡಿದ್ರೆ ಸಾಕಾಗುತ್ತದೆಯೇ? ಈ ಪ್ರದೇಶ ಕಲ್ಯಾಣವಾದಾಗ ಮಾತ್ರ ಆ ಹೆಸರಿಗೆ ನಿಜವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು'' ಎಂದರು.
''ಕಲಬುರಗಿ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಯಾಗಿರುವುದು ಖುಷಿ ವಿಚಾರ. ಜೊತೆಗೆ ರಾಜ್ಯದ ಆಯಾ ಭಾಗದ ಜನರಿಗೆ ಅನುಕೂಲಕರವಾದ ಆಸ್ಪತ್ರೆಗಳಿವೆ. ರಾಯಚೂರು ಜಿಲ್ಲೆಯ ಜನರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್, ಬೆಂಗಳೂರು ಸೇರಿದಂತೆ ಬೇರೆ ಕಡೆ ತೆರಳಬೇಕಾಗಿದೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ನ್ಯಾಯ ಸಮ್ಮತವಾಗಿ ಏಮ್ಸ್ ಸ್ಥಾಪನೆ ಮಾಡುವುದು ಸೂಕ್ತ. ಇದಕ್ಕೆ ಜಿಲ್ಲೆಯ ನಿವಾಸಿಯಾಗಿ ನಾನು ಒತ್ತಾಯಿಸುತ್ತೇನೆ'' ಎಂದರು.