ಮೈಸೂರು: ಕೇಂದ್ರದ ಜಲಸಂಪನ್ಮೂಲ ಸಚಿವರು ಕರ್ನಾಟಕ ಹಾಗೂ ತಮಿಳುನಾಡಿಗೆ ತಜ್ಞರ ತಂಡ ಕಳುಹಿಸಿ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು, ಬೆಂಗಳೂರು, ಮಂಡ್ಯ ಜನರಿಗೆ ಕಾವೇರಿ ಜೀವನದಿಯಾಗಿದೆ. ಈ ನದಿ ವಿಚಾರದಲ್ಲಿ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಬೇಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ಎಷ್ಟು ನೀರು ಬೇಕೆಂದು ನಿರ್ಧಾರ ಆಗಬೇಕಿದೆ. ಆದರೆ ಹಳೆಯ ಮಾಪನ ಈಗಲೂ ಮುಂದುವರೆದಿದ್ದು, ಕುಡಿಯಲು ಪ್ರತಿವರ್ಷ 35 ಟಿಎಂಸಿ ನೀರು ಬೇಕು. ನಮಗೆ ಕನ್ನಂಬಾಡಿ ಹಾಗೂ ಕಬಿನಿಯಿಂದ 50 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಾಗಿದ್ದರೂ ಹಳೆಯ ಮಾಪನ ಮುಂದುವರಿಕೆ: ಈಗಿರುವ ನೀರಿನಲ್ಲಿ ಬೇಸಾಯ ಹಾಗೂ ಕುಡಿಯುವ ನೀರಿಗೆ ಹಂಚಿಕೆ ಆಗಬೇಕು. ಆದರೆ ಇದು ಜನಸಂಖ್ಯೆ ಹೆಚ್ಚಾದರೂ ಹಳೆಯ ಮಾಪನ ಮಾತ್ರ ಬಳಸುತ್ತಿದ್ದೇವೆ. ಇದರ ಜೊತೆಗೆ ಕರ್ನಾಟಕ ಮೊನ್ನೆ ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಸರಿಯಾದ ದಾಖಲೆ ಹಾಗೂ ವಾದವನ್ನು ಮಂಡಿಸಲಿಲ್ಲ. ನೀರು ಬಿಟ್ಟ ನಂತರ ಪರಿಸ್ಥಿತಿ ಕೈ ಮೀರಿದ ಮೇಲೆ ದೆಹಲಿಯಲ್ಲಿ ಬಂದು ಸಭೆ ಮಾಡಿದರು. ಆ ಸಂದರ್ಭದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿಯನ್ನು ವಿವರಿಸಿದರು. ಆಮೇಲೆ ಕೇಂದ್ರ ಸಚಿವರು ಕರ್ನಾಟಕ ಹಾಗೂ ತಮಿಳುನಾಡಿಗೆ ತಜ್ಞರ ತಂಡವನ್ನು ಕಳುಹಿಸಿ ಡ್ಯಾಮ್ ಗಳಲ್ಲಿ ಎಷ್ಟೆಷ್ಟು ನೀರಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.