ಮೈಸೂರು:ಸಿಡಿ ಆರೋಪದ ಬಗ್ಗೆ ಡಿ.ಕೆ. ಶಿವಕುಮಾರ್ ಸಮರ್ಥವಾಗಿ ಉತ್ತರ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಿಡಿಗಳಿವೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಿಡಿಗಳು ಸಾಕಷ್ಟು ಬರುತ್ತವೆ. ಸಿಡಿ ವಿಚಾರ ಇಟ್ಟುಕೊಂಡು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಲ್ಲ. ಆದರೆ, ಬಿಜೆಪಿಯವರು ಬ್ಲ್ಯಾಕ್ ಮೇಲ್ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಇಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳನ್ನು ಸಿಬಿಐ ತನಿಖೆಗೆ ಕೊಡಲು ಬರುವುದಿಲ್ಲ. ಟಿಕೆಟ್ ಘೋಷಣೆ ಆಗುವವರೆಗೂ ಸಿದ್ದರಾಮಯ್ಯ ಕೂಡ ಅಕಾಂಕ್ಷಿಯೇ. ಎಐಸಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನ ಎಲ್ಲರೂ ಆಕಾಂಕ್ಷಿಗಳೇ ಎಂದರು.
ಎರಡು ಕ್ಷೇತ್ರಗಳಲ್ಲಿ ಯಾರು ಆಕಾಂಕ್ಷಿಗಳಿಲ್ಲ: ಈ ಬಾರಿ ಎರಡು ಕ್ಷೇತ್ರಗಳಲ್ಲಿ ಯಾರು ಟಿಕೇಟ್ ಆಕಾಂಕ್ಷಿಗಳು ಇಲ್ಲ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯಾರು ಯೋಚನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಪರಮೇಶ್ವರ್ ರಾಜೀನಾಮೆ ಕೊಟ್ಟಿಲ್ಲ. ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನ ಬಣ ರಾಜಕಾರಣದ ಬಗ್ಗೆ ಹೇಳಿದ್ದೇನು?:ನಮ್ಮಲ್ಲಿ ಸಾವಿರಾರು ಬಣಗಳು ಇವೆ, ಸಣ್ಣ ಸಣ್ಣ ನದಿಗಳು ಸರೋವರ ಸೇರುತ್ತವೆ. ನಂತರ ಸಮುದ್ರ ಸೇರುತ್ತವೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಕಾಂಗ್ರೆಸ್ ಮಹಾಸಾಗರ ಇದ್ದಂತೆ ಎಂದ ಅವರು, ನನಗೆ ಯಾವುದೇ ಅಸಮಾಧಾನ ಇಲ್ಲ. ಕೇಂದ್ರ ಚುನಾವಣಾ ಸಮಿತಿಯಲ್ಲಿ ರಾಜ್ಯದಿಂದ ನಾನೊಬ್ಬನೇ ಸದಸ್ಯ. ನಾನು ಸಕ್ರಿಯವಾಗಿ ಕಾಂಗ್ರೆಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಬಣ ರಾಜಕೀಯ ಕಾಂಗ್ರೆಸ್ನಲ್ಲಿ ಇಲ್ಲ, ಯಾರ್ಯಾರಿಗೆ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದರು.