ಎಸ್ಎಫ್ಐ ಜಿಲ್ಲಾಧ್ಯಕ್ಷ ಟಿ.ಎಸ್. ವಿಜಯ್ ಕುಮಾರ್ ಸ್ಪಷ್ಟನೆ ಮೈಸೂರು : ಸಂಸತ್ತಿನ ಒಳಗೆ ಸ್ಮೋಕ್ ಕ್ರ್ಯಾಕರ್ವೊಂದರ ಸ್ಪ್ರೇಗೆ ಸಂಬಂಧಿಸಿದ ಆರೋಪಿ ಮನೋರಂಜನ್ ಬದಲಾಗಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಟಿ.ಎಸ್. ವಿಜಯ್ ಕುಮಾರ್ ಅವರ ಹಳೆ ಫೋಟೋ ಬಳಸಿ, ಇವರೇ ಮನೋರಂಜನ್ ಎಂದು ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಪಪ್ರಚಾರ ಮಾಡಿದವರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಿಜಯ ಕುಮಾರ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟಿ.ಎಸ್ ವಿಜಯ್ ಕುಮಾರ್ ಕಳೆದ 5 ವರ್ಷಗಳಿಂದ ಭಾರತ ವಿದ್ಯಾರ್ಥಿ ಫೆಡರೇಷನ್ (SFI)ನ ಕಾರ್ಯಕರ್ತ ಹಾಗೂ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ವಿಜಯ್ ಕುಮಾರ್ ದೂರಿನಲ್ಲೇನಿದೆ? :ಮೈಸೂರು ಸೈಬರ್ ಪೊಲೀಸ್ ಠಾಣೆಗೆ ವಿಜಯ್ ಕುಮಾರ್ ನೀಡಿರುವ ದೂರಿನಲ್ಲಿ, ತನ್ನ ಭಾವಚಿತ್ರ ಬಳಸಿ ದೇಶದ ಸಂಸತ್ತಿನ ಒಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ ಆರೋಪಿ ಮನೋರಂಜನ್ ನಾನೇ ಎಂದು ನನ್ನ ವಿರುದ್ಧ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ತೇಜೋವಧೆ ಮಾಡಲಾಗುತ್ತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.
ಜತೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಹಳೆಯ ಭಾವ ಚಿತ್ರ ಬಳಸಿ ವಿವಿಧ ಸಾಮಾಜಿಕ ಜಾಲತಾಣದ ಆ್ಯಪ್ಗಳಲ್ಲಿ ಹಲವರು ವಿವಿಧ ರೀತಿಯಲ್ಲಿ ಬರೆದು ಹಾಕಿ ನನ್ನ ವಿರುದ್ದ ಹಾಗೂ SFI ಸಂಘಟನೆ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಅಪಪ್ರಚಾರದಲ್ಲಿ ನನಗೆ ಮಾನಸಿಕ ಕಿರುಕುಳ ಹಾಗೂ ಸಂಘಟನೆಗೆ ಅವಮಾನ ಮಾಡುವ ರೀತಿಯ ಕಾಮೆಂಟ್ಗಳನ್ನು ಹಾಕಿರುತ್ತಾರೆ. ಸಂಸತ್ ಒಳಗಿನ ದಾಳಿಯ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಹಾಗೂ ಈ ಪ್ರಕರಣಕ್ಕೆ ನನ್ನನ್ನು ಮತ್ತು SFI ಸಂಘಟನೆಯನ್ನು ದುರುದ್ದೇಶಪೂರ್ವಕವಾಗಿ ಎಳೆದು ತಂದು ಈ ಪ್ರಕರಣಕ್ಕೆ ತಳುಕು ಹಾಕಿರುವ, ಈ ಮೇಲಿನವರ ವಿರುದ್ಧ ಹಾಗೂ ಅವರು ಮಾಡಿದ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ಮಾಡಿರುವವರ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಟಿ.ಎಸ್.ವಿಜಯ್ ಕುಮಾರ್, ಕಾರ್ಯದರ್ಶಿ ಅಭಿ, ವೀರಭದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಜಗದೀಶ್ ಸೂರ್ಯ, ಕೆ.ಬಸವರಾಜ್ ಹಾಜರಿದ್ದರು.
ಇದನ್ನೂ ಓದಿ :ಮನೋರಂಜನ್ ಮೈಸೂರಿನ ಮನೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳ ಭೇಟಿ: ಮಾಹಿತಿ ಸಂಗ್ರಹ