ಮೈಸೂರು: ಎರಡನೇ ಹಂತದ ಕೋವಿಡ್ ಭೀತಿಯಿಂದ ಮೈಸೂರು ಅರಮನೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ಕಳೆದ ವರ್ಷ ಕೊರೊನಾದಿಂದ ಮೈಸೂರು ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಈ ನಡುವೆ ಕೊಂಚ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮಕ್ಕೆ ಮತ್ತೆ ಕೊರೊನಾ ಕಾಟ ಎದುರಾಗಿದೆ. ಎರಡನೇ ಹಂತದ ಕೊರೊನಾ ಹರಡುತ್ತಿದೆ ಎಂಬ ಸುದ್ದಿಯಿಂದ ಭಯಗೊಂಡ ಪ್ರವಾಸಿಗರು ಮೈಸೂರಿನ ಕಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕೇರಳದಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಇತ್ತೀಚೆಗೆ ಅವರ ಸಂಖ್ಯೆಯೂ ಸಹ ಕಡಿಮೆಯಾಗಿದೆ.
ಇಳಿಕೆ ಕಂಡ ಪ್ರವಾಸಿಗರ ಸಂಖ್ಯೆ:
ಕಳೆದ ವಾರ ಮೈಸೂರು ಅರಮನೆಗೆ ಪ್ರತಿ ದಿನ 4 ರಿಂದ 6 ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕಳೆದ 2-3 ದಿನಗಳಿಂದ 2 ಸಾವಿರಕ್ಕೂ ಕಡಿಮೆ ಪ್ರವಾಸಿಗರು ಅರಮನೆಗೆ ಆಗಮಿಸುತ್ತಿದ್ದಾರೆ ಎಂದು ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ಈ ಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.