ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ತಮ್ಮ ಕೊಠಡಿಯಲ್ಲಿ ಕಡತಗಳನ್ನು ಎಸೆಯುವ ಮೂಲಕ ಕೂಗಾಡಿರುವ ಘಟನೆ ನಡೆದಿದೆ. ಇವರನ್ನು ಸಮಾಧಾನಪಡಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ತಹಶೀಲ್ದಾರ್ ರತ್ನಂಬಿಕಾ ಅವರ ಬಳಿ ರೈತ ಸಂಘದ ನಾಗರಾಜು, ಸಂಘಟನೆಯೊಂದರ ಮುಖಂಡ ಶಿವಕುಮಾರ್ ಲಂಚದ ವಿಚಾರವಾಗಿ ದೂರು ನೀಡಲು ಬಂದಿದ್ದರು. ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಮನೆ ಹಾನಿಯಾದ ರೈತರು ಹಾಗೂ ಬಡವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಸ್ಥಳೀಯ ಗ್ರಾಮ ಲೆಕ್ಕಿಗರು ಹಾಗೂ ಇತರ ಅಧಿಕಾರಿಗಳು ಲಂಚ ಕೇಳುತ್ತಾರೆ ಎಂದು ಹೇಳಿದ್ದಾರೆ.
ದೂರು ನೀಡಲು ಬಂದವರ ಮೇಲೆ ರೇಗಾಡಿದ ತಹಶೀಲ್ದಾರ್ ಲಂಚ ನೀಡದಿದ್ದರೆ ಅನರ್ಹ ವ್ಯಕ್ತಿಗಳಿಂದ ಲಂಚ ಪಡೆದು ಅವರನ್ನು ಆಯ್ಕೆ ಮಾಡುತ್ತಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ರತ್ನಂಬಿಕಾ ಅವರ ಕೊಠಡಿಗೆ ಬಂದು ದೂರು ನೀಡಿದ್ದಾರೆ. ಸಂಘಟನೆಯವರ ಮಾತನ್ನು ಕೇಳಿದ ರತ್ನಂಬಿಕಾ ಕ್ಷಣ ಮಾತ್ರದಲ್ಲಿ ಏರು ಧ್ವನಿಯಿಂದ, ತಮ್ಮ ಕುರ್ಚಿಯಿಂದೆದ್ದು ಫೈಲ್ಗಳನ್ನು ಎಸೆದು ಸಂಘಟನೆಯ ಮುಖಂಡರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಹೆಚ್.ಡಿ.ಕೋಟೆ: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ; ಮನೆ, ಎತ್ತಿನ ಗಾಡಿ ಜಖಂ
ತಕ್ಷಣ ಕಚೇರಿಯ ಸಿಬ್ಬಂದಿ ತಹಶೀಲ್ದಾರ್ ಅವರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ತಾಲೂಕು ದಂಡಾಧಿಕಾರಿ ವರ್ತನೆಗೆ ಮುಖಂಡರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಈ ಘಟನೆ ಹೆಚ್ ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದಿದೆ.