ಮೈಸೂರು:ಸಿಂಹದ ಹೃದಯ ಇರುವವರಿಗೆ ವಿ.ಡಿ. ಸಾವರ್ಕರ್ ಅವರು ಹೀರೋ ಆಗಿಯೇ ಕಾಣುತ್ತಾರೆಯೇ ವಿನಃ ಸೋಲಿನ ಭಯದಿಂದ ಕೇರಳಕ್ಕೆ ಓಡಿ ಹೋಗುವವರಿಗಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ನಗರದ ಮೈಸೂರು ಲಿಟರರಿ ಪೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ನಡೆದ ವಿಕ್ರಮ್ ಸಂಪತ್ ಅವರ 'ಸಾವರ್ಕರ್ : ಎಕೋಸ್ ಫ್ರಮ್ ಎ ಫರ್‌ಗಟನ್ ಪಾಸ್ಟ್' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾವರ್ಕರ್ ಅವರನ್ನು ವಿವಾದಾತ್ಮಕ ವ್ಯಕ್ತಿಯಾಗಿ ಮಾಡುವ ಮೂಲಕ ಅವರ ಇತಿಹಾಸಕ್ಕೆ ಅನ್ಯಾಯವಾಗಿದೆ. ಈ ಕೃತಿಯಿಂದ ಅವರ ಇತಿಹಾಸಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಇಸ್ರೇಲಿಗರೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳಬೇಕೆಂದು ಸಾವರ್ಕರ್ ಒತ್ತಾಯಿಸಿದ್ದರು. ಇಸ್ರೇಲ್‌ನೊಂದಿಗೆ ಸ್ನೇಹ ಬೆಳೆಸಿದರೆ ಎಲ್ಲಿ ಶಿವಾಜಿನಗರ ಮತ್ತು ಎನ್.ಆರ್ ಮೊಹಲ್ಲಾದಲ್ಲಿ ಮತ ಬೀಳುವುದಿಲ್ಲವೋ ಹಿಂದಿನ ಸರ್ಕಾರಗಳ ರಾಜಕೀಯ ದುರುದ್ದೇಶದಿಂದ ಸಂಬಂಧ ಬೆಳೆಸಲಿಲ್ಲ ಎಂದರು.
ಸಾವರ್ಕರ್ : ಎಕೋಸ್ ಫ್ರಮ್ ಎ ಫರ್‌ಗಟನ್ ಪಾಸ್ಟ್ ಪುಸ್ತಕ ಬಿಡುಗಡೆ ಹಿಂದೂ ಸಮಾಜದಲ್ಲಿದ್ದ ಜಾತಿ ಪದ್ಧತಿಗಳನ್ನು ವಿರೋಧಿಸಿದ್ದ ಸಾವರ್ಕರ್ ಸಹಭೋಜನ, ಅಂತರ್ಜಾತಿ ವಿವಾಹಗಳನ್ನು ಮೊದಲು ಪ್ರೋತ್ಸಾಹಿಸಿದ್ದರು. ಯಾವ ಜಾತಿಯೇ ಇರಲಿ ಜಾತೀಯತೆಯಿಂದ ಹೊರಗೆ ಬಂದು ಹಿಂದೂಗಳು ಸಂಘಟಕರಾಗಬೇಕು ಎಂದು ಕರೆ ನೀಡಿದ್ದರು. ಆದರೆ, ಇದೆಲ್ಲವನ್ನು ಇತಿಹಾಸದಲ್ಲಿ ಮರೆಮಾಚಲಾಗಿದೆ. ಸಾವರ್ಕರ್ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಹೋದರೆ ರೋಮಾಂಚನವಾಗುತ್ತದೆ. ಅವರ ವಿರುದ್ಧ ಯಾರಾದರೂ ಮಾತನಾಡಿದರೆ, ನನಗೆ ಅವರು ಇತಿಹಾಸಕ್ಕೆ ಅವಮಾನ ಮಾಡುತ್ತಿದ್ದಾರೆ ಎನ್ನಿಸುತ್ತದೆ ಎಂದು ಹೇಳಿದರು.
ಸಾವರ್ಕರ್ ಗೋಡೆಗಳ ಮೇಲೆ ಉಗುರಿನಿಂದ ದೇಶಭಕ್ತಿಯ ವಿಚಾರಗಳನ್ನು ಬರೆಯುವಾಗ, ನೆಹರು ಡಿಸ್ಕವರಿ ಆಫ್ ಇಂಡಿಯಾ ಬರೆಯುತ್ತಿದ್ದರು ಎಂದು ವ್ಯಂಗ್ಯವಾಡಿದ ಅವರು, ದೇಶದಲ್ಲಿ ಪ್ರತಿಯೊಬ್ಬರ ಯುವಕರು ಕಡ್ಡಾಯವಾಗಿ ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಅರವಿಂದ ಘೋಷ್, ಸಾವರ್ಕರ್ ಅವರನ್ನು ಸರಿಯಾಗಿ ಓದುವ ಅಗತ್ಯವಿದೆ. ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಯಾವುದೇ ಸೈದ್ದಾಂತಿಕ ದೃಷ್ಠಿಕೋನದಲ್ಲಿ ನೋಡದೆ, ಸತ್ಯವನ್ನು ಸತ್ಯವಾಗಿ ಪ್ರಕಟಿಸುವ ಅಗತ್ಯವಿತ್ತು. ಅದನ್ನು ವಿಕ್ರಮ್ ಸಂಪತ್ ಅವರು ಉತ್ತಮವಾಗಿ ಮಾಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅವರ ವಿದ್ವತ್ ಅನ್ನು ಜಾತಿ ದೃಷ್ಠಿಕೋನದಲ್ಲಿ ನೋಡಿದವರನ್ನು ಸಾವರ್ಕರ್ ವಿರೋಧಿಸಿದ್ದರು ಎಂದರು.