ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹೋದ ಕಡೆ ಬಿಜೆಪಿ ಸೋತಿಲ್ವಾ?, ಪಂಜಾಬ್, ತೆಲಂಗಾಣ, ಕೇರಳದಲ್ಲಿ ಬಿಜೆಪಿ ಸೋತಿರುವುದನ್ನ ನಾವು ಕಂಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ರಾಜ್ಯಕ್ಕೆ ರಾಹುಲ್ ಗಾಂಧಿ ಬಂದರೆ ಬಿಜೆಪಿಗೆ ಲಾಭ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿ, ಪಂಜಾಬ್, ತೆಲಂಗಾಣ, ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋಗಿದ್ದರು. ಅಲ್ಲಿ ಬಿಜೆಪಿ ಸೋತಿಲ್ವಾ? ಅವರು ಕೂಡ ಸೋಲ್ತಾರೆ. ಇದು ಕೇವಲ ರಾಜಕಾರಣಕ್ಕಾಗಿ ನೀಡುತ್ತಿರುವ ಹೇಳಿಕೆ ಎಂದು ಲೇವಡಿ ಮಾಡಿದರು.
ರಾಜಕಾರಣದಲ್ಲಿ ನಾನು ಕರ್ಣನಿದ್ದಂತೆ ಎಂಬ ಸಿಎಂ ಹೇಳಿಕೆ ಬಗ್ಗೆ, ಭಂಡರು ಮಾತ್ರ ಆ ರೀತಿ ಮಾತನಾಡುವುದು. ಟೀಕೆಗೂ, ನಮಗೂ ಸಂಬಂಧವಿಲ್ಲ ಎನ್ನುವವರು ಹಾಗೆ ಹೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನಾನು ಲಾ ಓದಿದ್ದೀನಿ. ಅವರು ಲಾ ಓದಿಲ್ಲಾ, ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ : ಸಿದ್ದರಾಮಯ್ಯ
ಡರ್ಟಿ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿ, ನಾವು ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿ ಸರ್ಕಾರದವರು ರಾಜಕಾರಣ ಮಾಡುವ ಉದ್ದೇಶದಿಂದ ಮಾತನಾಡುತ್ತಾರೆ. ಡರ್ಟಿ ಪಾಲಿಟಿಕ್ಸ್ ಮಾಡುವುದು ಸಂಘ ಪರಿವಾರದವರು. ಕಾಂಗ್ರೆಸ್‌ನವರು ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಮಹಾತ್ಮಗಾಂಧಿ ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶನ ಮೆರವಣಿಗೆಯಲ್ಲಿ ಗೋಡ್ಸೆ ಫೋಟೋ ಇಟ್ಟುಕೊಂಡು ಓಡಾಡ್ತಾರೆ. ಇವರಿಗೆ ಯಾವ ನೈತಿಕತೆ ಇದೆ?. ಪಾಪ ಇವರಿಗೆ ಡರ್ಟಿ ಪಾಲಿಟಿಕ್ಸ್ ಅಂದ್ರೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.