ಮೈಸೂರು: ಟಾಟಾಏಸ್ ವಾಹನ ಪಲ್ಟಿಯಾಗಿ ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಈರೇಗೌಡನಹುಂಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳು ಮಕ್ಕಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಘಟಕಕ್ಕೆ ದಾಖಲಿಸಲಾಗಿದೆ.
ತಾಲೂಕಿನ ಬಳ್ಳೂರು ಹುಂಡಿ, ನಾಗಣಪುರ ಕಾಲೋನಿಯ ಮಾರ್ಗವಾಗಿ ಟಾಟಾ ಏಸ್ ವಾಹನ ಸಂಚರಿಸುತ್ತಿತ್ತು. ಎಂದಿನಂತೆ ಶಾಲಾ ಮಕ್ಕಳು ಹೆಡಿಯಾಲ ಪ್ರೌಢ ಶಾಲೆಗೆ ತೆರಳುವ ಸಲುವಾಗಿ ವಾಹನ ಏರಿದ್ದಾರೆ. ಚಾಲಕನ ಅಜಾಗರೂಕತೆ ಚಾಲನೆಯಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಳ್ಳೂರು ಹುಂಡಿ ಗ್ರಾಮದ ಇಬ್ಬರು ವ್ಯಕ್ತಿಗಳು ಸೇರಿ ಒಂಬತ್ತು ಶಾಲಾ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಕೆಆರ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕಕ್ಕೆ ರವಾನಿಸಲಾಗಿದೆ.
ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಘಟನೆ, ಆಟೋ ಮತ್ತು ಬೈಕ್ ನಡುವೆ ಡಿಕ್ಕಿ:ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ಬಳಿ ನಡೆದಿದೆ. ನಂಜನಗೂಡಿನ ಸತ್ಯ ಫೈನಾನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ಸಿದ್ದರಾಜು ಮತ್ತು ಕಣೇನೂರು ಗ್ರಾಮದ ಮಹೇಂದ್ರ ಎಂಬುವವರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಂಜನಗೂಡು ಕಡೆಯಿಂದ ಹುಲ್ಲಹಳ್ಳಿ ಕಡೆಗೆ ಬರುತ್ತಿದ್ದ ಆಟೋ ಮತ್ತು ಹುಲ್ಲಹಳ್ಳಿಯಿಂದ ನಂಜನಗೂಡು ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಆಟೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಮೂವರು ಗಾಯಾಳುಗಳನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ಘಟನೆ, ಟಾಟಾಏಸ್ ಮತ್ತು ಲಾರಿ ಅಪಘಾತ:ಟಾಟಾ ಏಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೆ ನಾಲ್ವರು ಮೃತಪಟ್ಟ ಘಟನೆ ಕಳೆದ ಎರಡು ದಿನಗಳ ಹಿಂದೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಬೆಳಗ್ಗೆ ನಡೆದಿತ್ತು. ಇದರಲ್ಲಿ ಕಣೇಕಲ್ಲೂರು (28), ರಮೇಶ ನಿಂಗಪ್ಪ ಕಣೇಕಲ್ಲೂರು (28), ಇಸ್ಮಾಯಿಲ್ ರಷೀದ್ (25), ರವಿ ರಾಜಪ್ಪ (20), ಅಂಬರೀಶ್ ಸೂಗಪ್ಪ ಮೃತದುರ್ದೈವಿಗಳು ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ:ದಾವಣಗೆರೆ: ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ, ಇಬ್ಬರು ಸಾವು- ಸಿಸಿಟಿವಿ ವಿಡಿಯೋ