ಮೈಸೂರು:ನಿನ್ನೆ ಆರ್.ಎಸ್.ನಾಯ್ಡು ನಗರದಲ್ಲಿನ ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನಿಖೆ ನಡೆಸಿದಾಗ ಆರೋಪಿ ಹಾಗೂ ಯುವತಿ ಒಬ್ಬರಿಗೊಬ್ಬರು ಪರಿಚಯಸ್ಥರು ಎಂದು ತಿಳಿದು ಬಂದಿದೆ.
ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?
ಪ್ರಕರಣ ಸಂಬಂಧ ಇಂದು ನ್ಯಾಯಾಧೀಶರ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ನೀಡಲಿದ್ದಾಳೆ. ಮೈಸೂರಿನ ನರಸಿಂಹ ರಾಜ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣ ದಾಖಲಾಗಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಆಹಾರವನ್ನು ಕೇಳಿದ್ದು, ಅದಕ್ಕಾಗಿ ಮನೆಯ ಬಾಗಿಲು ತೆರೆದ ಸಂದರ್ಭದಲ್ಲಿ ಅತ್ಯಾಚಾರ ಮತ್ತು ಹಲ್ಲೆ ಮಾಡಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಳು. ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ತನಿಖೆ ನಡೆಸಿದಾಗ ಇಬ್ಬರು ಒಬ್ಬರಿಗೊಬ್ಬರು ಪರಿಚಯವಿರುವುದಾಗಿ ತಿಳಿದು ಬಂದಿದೆ. ಆದರೆ ಸಂತ್ರಸ್ತೆ ಆರೋಪಿತ ವ್ಯಕ್ತಿಯನ್ನು ಅಪರಿಚಿತ ಎಂದು ಯಾವ ಕಾರಣಕ್ಕೆ ಹೇಳಿದ್ದಾಳೆ ಎಂಬುದು ತಿಳಿದು ಬಂದಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.