ಮೈಸೂರು : ಪ್ರವಾಸಿಗರ ನಗರಿ, ಅರಮನೆಗಳ ನಗರಿ ಹಾಗೂ ಪಾರಂಪರಿಕ ನಗರಿ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪಾರಂಪರಿಕ ನಗರಿಯಲ್ಲಿ ಈಗ ಪಾರಂಪರಿಕ ಶೈಲಿಯಲ್ಲಿ ಸಾರ್ವಜನಿಕ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದೆ. ಈ ಪಾರಂಪರಿಕ ಶೌಚಾಲಯದಲ್ಲಿ ವಿಶೇಷಚೇತನರಿಗೆ ಉಚಿತ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಈ ಬಗ್ಗೆ ಪಾರಂಪರಿಕ ತಜ್ಞರ ಸಂದರ್ಶನ ಇಲ್ಲಿದೆ.
ಪ್ರವಾಸಿಗರ ನಗರಿಗೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಜೊತೆಗೆ ಸುತ್ತಮುತ್ತಲ ಜಿಲ್ಲೆಗಳಿಂದ ವ್ಯಾಪಾರ ವಹಿವಾಟಿಗಾಗಿ ಸಾವಿರಾರು ಜನ ಆಗಮಿಸುತ್ತಾರೆ. ಇಂತವರಿಗೆ ಮೈಸೂರು ನಗರದಲ್ಲಿ ಶೌಚಾಲಯದ ಸಮಸ್ಯೆ ದಿನನಿತ್ಯ ಕಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಮೈಸೂರು ಮಹಾನಗರ ಪಾಲಿಕೆ ಹಾಗೂ ನಮ್ಮ ಫೌಂಡೇಶನ್ ವತಿಯಿಂದ ಮೈಸೂರಿನ ಪುರಭವನ ಹಾಗೂ ಗಾಂಧಿ ವೃತ್ತದ ಮಧ್ಯ ಪಾರಂಪರಿಕ ರೀತಿಯ ಶೌಚಾಲಯವನ್ನ 1 ಕೋಟಿ 40 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದೆ. ಇಂದು ಶೌಚಾಲಯವನ್ನ ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು.
ಇದನ್ನೂ ಓದಿ :ಮಾರ್ಚ್ 25 ರಂದು "ಕೆಆರ್ ಪುರ ದಿಂದ ವೈಟ್‌ಫೀಲ್ಡ್ "ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆ
ಪಾರಂಪರಿಕ ಶೌಚಾಲಯದ ವೈಶಿಷ್ಟ್ಯತೆಗಳು : ಪಾರಂಪರಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ಶೌಚಾಲಯವು ಮೈಸೂರು ನಗರದ ಹೃದಯ ಭಾಗವಾದ ಅರಮನೆ, ದೊಡ್ಡಗಡಿಯಾರ, ಪುರಭವನ, ದೇವರಾಜ ಮಾರುಕಟ್ಟೆ ಹಾಗೂ ಗಾಂಧಿ ವೃತ್ತದ ಹತ್ತಿರದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮೈಸೂರು ಮಹಾನಗರ ಪಾಲಿಕೆ ಜಾಗ ನೀಡಿದ್ದು, ಪಾರಂಪರಿಕ ರೀತಿಯ ಶೌಚಾಲಯದಲ್ಲಿ ಪಾರಂಪರಿಕ ರೀತಿಯ ಕಂಬದ ಮಾದರಿ, ಕಮಾನು, ಮುಖ್ಯದ್ವಾರ ಸೇರಿದಂತೆ ಎಲ್ಲವೂ ಪಾರಂಪರಿಕ ಶೈಲಿಯಲ್ಲಿದೆ.