ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ 'ಈಟಿವಿ ಭಾರತ್' ಜೊತೆ ಮಾತನಾಡಿದರು. ಮೈಸೂರು: ಸರ್ಕಾರ ಉಚಿತ ಶಿಕ್ಷಣ ಒದಗಿಸುತ್ತಿದೆ ನಿಜ. ಆದರೆ ಹಲವೆಡೆಯ ಶಾಲೆಗಳಿಗೆ ಸೂಕ್ತ ಸೌಲಭ್ಯ, ಸುಸಜ್ಜಿತ ಕಟ್ಟಡ ನಿರ್ಮಿಸಲು ಇನ್ನೂ ಸಾಧ್ಯವಾಗುತ್ತಿಲ್ಲ. ಆದರೆ ಇಲ್ಲೊಬ್ಬ ಹಳೆ ವಿದ್ಯಾರ್ಥಿ ತಾನು ಓದಿದ ಸರ್ಕಾರಿ ಶಾಲೆ ಶಿಥಿಲಾವಸ್ಥೆ ತಲುಪಿರುವುದನ್ನು ಮನಗಂಡು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸಕಲ ಸೌಲಭ್ಯಗಳುಳ್ಳ ಸುಸಜ್ಜಿತ ಶಾಲೆ ಕಟ್ಟಿಸಿಕೊಟ್ಟಿದ್ದಾರೆ.
ಅಮೆರಿಕದ ನಿವಾಸಿ, ಎನ್‌ಆರ್‌ಐ ವೈದ್ಯರಾಗಿರುವ ಮೈಸೂರಿನ ಡಾ.ಸಚ್ಚಿದಾನಂದ ಮೂರ್ತಿ ಸುಸಜ್ಜಿತ ಶಾಲೆ ನಿರ್ಮಿಸಿದ ಮಹನೀಯ. ಇವರು ಇದೇ ಶಾಲೆಯಲ್ಲಿ 1958ರಲ್ಲಿ 1ರಿಂದ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದರಂತೆ.
ಶತಮಾನ ಕಂಡ ಸರ್ಕಾರಿ ಶಾಲೆ:ಮೈಸೂರು ನಗರದ ದಕ್ಷಿಣ ವಲಯಕ್ಕೆ ಸೇರಿದ ಗಾಡಿ ಚೌಕದ ಬಳಿ ಇರುವ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆಯನ್ನು 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದರು. ಶತಮಾನ ಪೂರೈಸಿರುವ ಈ ಶಾಲೆ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿತ್ತು. ಡಾ.ಸಚ್ಚಿದಾನಂದ ಮೂರ್ತಿ ಅವರು ಈ ಶಾಲೆಯ ಸ್ಥಿತಿಗತಿ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದ್ದು, ಅವರು ಮಾಹಿತಿ ನೀಡಿದ್ದರು. ಇದೇ ಜಾಗದಲ್ಲಿ ಹೊಸ ಶಾಲೆ ನಿರ್ಮಿಸುವ ಸಲಹೆಯನ್ನೂ ನೀಡಿದ್ದರು. ನವೀಕರಣಕ್ಕೆ 18 ಲಕ್ಷ ರೂ ವೆಚ್ಚವಾಗುವ ಕುರಿತು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೂರ್ತಿ, ಎಲ್ಲ ಸೌಲಭ್ಯಗಳಿರುವ ದೊಡ್ಡ ಶಾಲೆಯನ್ನು ನಿರ್ಮಿಸುವುದಾಗಿ ಹೇಳಿದ್ದರಂತೆ. ಇದೀಗ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಎರಡಂತಸ್ತಿನ ಶಾಲಾ ಕಟ್ಟಡ ಸಿದ್ಧಗೊಂಡಿದೆ.
ಕಂಪ್ಯೂಟರ್ ಶಿಕ್ಷಣದ ಕೊಠಡಿ, ಗ್ರಂಥಾಲಯ, ಆಡಿಟೋರಿಯಂ ಹಾಗು ನೆಲ ಅಂತಸ್ತಿನಲ್ಲಿ ಕ್ಲಾಸ್ ರೂಂ, ಮೊದಲ ಅಂತಸ್ತಿನಲ್ಲಿ 300 ಜನ ಕುಳಿತುಕೊಳ್ಳಬಹುದಾದ ಆಡಿಟೋರಿಯಂ, ಶೌಚಾಲಯ, ಎರಡನೇ ಅಂತಸ್ತಿನಲ್ಲಿ ಊಟದ ಕೊಠಡಿ ನಿರ್ಮಿಸಲಾಗಿದೆ. ಮುಂದಿನ ತಿಂಗಳು ಪ್ರಾಥಮಿಕ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಕಟ್ಟಡ ಉದ್ಘಾಟನೆಗೆ ಸಿದ್ದವಾಗಿದೆ.
ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ಪ್ರತಿಕ್ರಿಯೆ:ಡಾ.ಸಚ್ಚಿದಾನಂದ ಮೂರ್ತಿ ಅವರಿಗೆ ಶಾಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಅವರಿಂದ ಹೊಸ ನೂತನ ಕಟ್ಟಡ ನಿರ್ಮಿಸಲು ಶ್ರಮಿಸಿದ ಮುಖ್ಯ ಶಿಕ್ಷಕ ರವಿಕುಮಾರ್ 'ಈಟಿವಿ ಭಾರತ್' ಜೊತೆ ಮಾತನಾಡಿ, "ಈ ಶಾಲೆಯಲ್ಲಿ ಡಾ.ಸಚ್ಚಿದಾನಂದ ಮೂರ್ತಿ ಅವರು 1958ರಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅವರ ಸ್ನೇಹಿತರೊಬ್ಬರು ನಮ್ಮ ಶಾಲೆಯಲ್ಲಿ ಹಳೆ ದಾಖಲಾತಿಗಳನ್ನು ಕೇಳಲು ಬಂದಾಗ ದಾಖಲಾತಿಗಳನ್ನು ತಕ್ಷಣ ಕಳಿಸಿಕೊಟ್ಟೆವು. ಆಗ ತಾನು ಓದಿದ ಶಾಲೆ ಹೇಗಿದೆ ಎಂದು ವಿಚಾರಿಸಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದು ಹೇಳಿದ್ದೆವು. ಆ ಸಂದರ್ಭದಲ್ಲಿ ಹೊಸ ಕಟ್ಟಡಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಪ್ರಾಜೆಕ್ಟ್ ಮಾಡಿ ಕಳಿಸಿ ಎಂದಿದ್ದರು. 18 ಲಕ್ಷ ರೂಪಾಯಿ ಆಗುತ್ತದೆ ಎಂದು ಪ್ರಾಜೆಕ್ಟ್ ಮಾಡಿದ್ದೆವು. ಆದರೆ ಅದಕ್ಕಿಂತಲೂ ದೊಡ್ಡದು ಮಾಡಿ ಎಂದಿದ್ದರು. ನಂತರ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿಕೊಡುವುದಾಗಿ ಮೂರ್ತಿ ತಿಳಿಸಿದ್ದರು. ಈ ವಿಚಾರವನ್ನು ಬಿಇಒ ಹಾಗೂ ಡಿಡಿಪಿಐ ಗಮನಕ್ಕೆ ತಂದು ನೀಲನಕ್ಷೆ ತಯಾರಿಸಿದ್ದೆವು. ಇದೀಗ ಒಂದೂವರೆ ಕೋಟಿ ರೂಪಾಯಿ ವೆಚ್ಚದ ಸರ್ಕಾರಿ ಶಾಲೆ ಹಾಗೂ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ, ಆಡಿಟೋರಿಯಂ ಇರುವ ಬಿಲ್ಡಿಂಗ್ ಅನ್ನು ನಿರ್ಮಾಣ ಮಾಡಿದ್ದೇವೆ. ಇದೇ ಸ್ಥಳದಲ್ಲಿದ್ದ ಹಳೆಯ ಕಟ್ಟಡಗಳನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ" ಎಂದರು.
ಇದನ್ನೂಓದಿ:ಯುವನಿಧಿ ಯೋಜನೆ ನೋಂದಣಿಗೆ ಡಿ.26 ರಂದು ಚಾಲನೆ; ಅರ್ಹರು ಯಾರು? ಅರ್ಜಿ ಸಲ್ಲಿಸುವುದೇಗೆ?