'ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಅಂತಿಮ'-ಜಿಟಿಡಿ ಮೈಸೂರು:ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಅಂತಿಮ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಟಿಪ್ಪು ಹೆಸರಿಡುವ ಕುರಿತಂತೆ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಸಾದ್ ಅಬ್ಬಯ್ಯ ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಸೂಚಿಸಿಲ್ಲ. ಸರ್ಕಾರ ಕೂಡ ಇದರ ಬಗ್ಗೆ ಯಾವುದೇ ಪ್ರಸ್ತಾವನೆ ಇಟ್ಟಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರನ್ನು ಕಟ್ಟಿ ಬೆಳೆಸಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರು. ಹಾಗಾಗಿ ನಿಲ್ದಾಣಕ್ಕೆ ಅವರ ಹೆಸರೇ ಅಂತಿಮ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ ಎಂದರು.
ನೂತನ ಸಂಸತ್ತಿನ ಅಧಿವೇಶನದಲ್ಲಿ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಸಂಸದ ಪ್ರತಾಪ್ ಸಿಂಹರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು, ಜಿ.ಟಿ.ದೇವೇಗೌಡರು ಪ್ರತಾಪ್ ಸಿಂಹ ಅವರನ್ನು ಬೆಂಬಲಿಸಿದರು. ಅಧಿವೇಶನದಲ್ಲಿ ಭದ್ರತಾ ಲೋಪ ಆಗಿರುವುದು ನಿಜ. ಭದ್ರತಾ ಲೋಪವೆಸಗಿರುವ ಅಧಿಕಾರಿಗಳಿಗೆ ಶಿಕ್ಷೆ ಆಗಲಿ. ಆದರೆ ಈ ವಿಚಾರವಾಗಿ ಪ್ರತಾಪ್ ಸಿಂಹರ ರಾಜೀನಾಮೆ ಕೇಳುವುದು ಯಾರಿಗೂ ಶೋಭೆ ತರುವುದಿಲ್ಲ.
ಶಾಸಕರು ಮತ್ತು ಸಂಸದರ ಕ್ಷೇತ್ರದ ಮತದಾರರು ಅಧಿವೇಶನ ನೋಡಲು ಪಾಸ್ ಕೇಳುತ್ತಾರೆ. ಈ ರೀತಿ ಕ್ಷೇತ್ರದ ಮತದಾರರು ಪಾಸ್ ಕೇಳಿದಾಗ ನಾವು ಕೊಡಲೇಬೇಕಿದೆ. ಪಾಸ್ ಕೇಳಿರುವ ವ್ಯಕ್ತಿ ನಮ್ಮ ಕ್ಷೇತ್ರದ ಮತದಾರರೇ ಎಂದು ಪರಿಶೀಲಿಸಿ, ಬಳಿಕ ನೀಡುತ್ತೇವೆ. ಆದರೆ ಸಂಸತ್ತಿನ ಕಲಾಪದ ವೇಳೆ ಉಂಟಾಗಿರುವ ಭದ್ರತಾ ವೈಫಲ್ಯದ ಬಗ್ಗೆ ಅಲ್ಲಿನ ಸಿಬ್ಬಂದಿ ಪಾಸ್ ಪರಿಶೀಲನೆ ಮಾಡಬೇಕಿತ್ತು ಎಂದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಪ್ರಮುಖವಾಗಿ ರೈತರ ಸಾಲ ಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದು, ಮುಖ್ಯಮಂತ್ರಿಗಳು ಯಾರು ಸಾಲ ಕಟ್ಟುತ್ತಾರೋ ಅವರ ಬಡ್ಡಿ ಮನ್ನಾ ಮಾಡುವ ಬಗ್ಗೆ ತಿಳಿಸಿದ್ದಾರೆ. ಆದರೆ ಕೇವಲ ಬಡ್ಡಿ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿಲ್ಲ. ಆದ್ದರಿಂದ 2025ರವರೆಗೆ ರೈತರ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟಲ್ಲಿ ಕ್ರಾಂತಿ: ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ