ಮೈಸೂರು: ವೈದ್ಯನನ್ನು ಅಪಹರಿಸಿ, ದಾಖಲೆ ಪತ್ರಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು 10 ವರ್ಷಗಳ ನಂತರ ಕುವೆಂಪುನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕುವೆಂಪುನಗರದ ನಿವಾಸಿಯಾಗಿದ್ದ ವೈದ್ಯ ಡಾ.ಎಂ.ಕೆ.ಮಹೇಶ್ ಅಪಹರಣಕ್ಕೊಳಗಾಗಿದ್ದರು. ಇದೀಗ ಪ್ರಕರಣದ ಆರೋಪಿ ಫಣಿರಾಜ್ ಗೌಡ ಎಂಬಾತನನ್ನು ಬಂಧಿಸಲಾಗಿದೆ.
ಘಟನೆಯ ಸಂಪೂರ್ಣ ವಿವರ: ದಟ್ಟಗಳ್ಳಿಯ ನಿವಾಸಿ ಫಣಿರಾಜ್ ಗೌಡ 2014 ಆಗಸ್ಟ್ 8ರಂದು ರಾತ್ರಿ ಡಾ.ಎಂ.ಕೆ.ಮಹೇಶ್ ಅವರನ್ನು ಅವರ ಮನೆಯಿಂದಲೇ ಅಪಹರಿಸಿ ತನ್ನ ಸ್ನೇಹಿತ ರಾಮಚಂದ್ರ ಹೆಗ್ಡೆ ಮನೆಯಲ್ಲಿ ಕೂಡಿಹಾಕಿದ್ದ. ಅಲ್ಲಿ ಮಹೇಶ್ ಅವರಿಂದ ಕೆಲವು ದಾಖಲೆಗಳಿಗೆ ಫಣಿರಾಜ್ ಬಲವಂತವಾಗಿ ಸಹಿ ಹಾಕಿಸಿದ್ದಲ್ಲದೇ, ರಾಮಚಂದ್ರ ಹೆಗ್ಡೆಯ ಖಾತೆಗೆ 20 ಸಾವಿರ ಹಣ ಹಾಕಿಸಿಕೊಂಡಿದ್ದಾನೆ. ಮಹೇಶ್ ಮೊಬೈಲ್ನಿಂದ ಅವರ ಸಂಬಂಧಿಕರಿಗೆ ಕರೆ ಮಾಡಿಸಿ 2 ಲಕ್ಷ ರೂ ಹಣವನ್ನೂ ಖಾತೆಗೆ ಹಾಕಿಸಿಕೊಂಡಿದ್ದ. ಬಳಿಕ ಕಾರಿನಲ್ಲಿ ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಗೆ ಕರೆದುಕೊಂಡು ಹೋಗಿ ಅಲ್ಲಿಂದ ಮಹೇಶ್ ಮೊಬೈಲ್ನಿಂದಲೇ ಅವರ ತಂದೆಗೆ ಕರೆ ಮಾಡಿಸಿ ಮತ್ತೆ 3 ಲಕ್ಷ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮಹೇಶ್ ಅವರನ್ನು ಬಿಡುಗಡೆ ಮಾಡಿದ್ದ.
ನಂತರ ಮೈಸೂರಿಗೆ ಬಂದ ಡಾ.ಮಹೇಶ್ ಕುವೆಂಪು ನಗರ ಠಾಣೆಯಲ್ಲಿ ಫಣಿರಾಜೇ ಗೌಡನ ಮೇಲೆ ದೂರು ದಾಖಲಿಸಿದ್ದರು. ಪೊಲೀಸರು ಭಾರತೀಯ ದಂಡ ಸಂಹಿತೆ 426, 468, 469, 471, 120, 34 ರಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕುವೆಂಪು ನಗರ ಇನ್ಸ್ಪೆಕ್ಟರ್ ಅರುಣ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಆರೋಪಿ ಫಣಿರಾಜ್ ಗೌಡನನ್ನು ಬಂಧಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.