ಮೈಸೂರು :ಕೊರೊನಾ ಎರಡನೇ ಅಲೆ ಅಬ್ಬರದಿಂದ ಬೆದರಿದ ಪ್ರವಾಸಿಗರು ಸಾಲು ಸಾಲು ರಜೆ ನಡುವೆಯೂ ಜಿಲ್ಲೆಯ ಪ್ರವಾಸಿ ತಾಣಗಳತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದಾಗಿ ಬಹುತೇಕ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ.
ಏ.10ರಿಂದ 14ರವರೆಗೆ ಸಾಲು ಸಾಲು ರಜೆಗಳಿವೆ. ಹೀಗೆ ರಜೆ ಇರುವುದರಿಂದ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಕ್ಕೆ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ, ಈ ಲೆಕ್ಕಚಾರವನ್ನ ಕೊರೊನಾ ಉಲ್ಟಾ ಮಾಡಿದೆ.
ಅರಮನೆ ನೋಡಲು ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಕೊರೊನಾ ಕಡಿಮೆಯಾದಾಗ ಅರಮನೆ ವೀಕ್ಷಿಸಲು ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದರು.
ಆದರೆ, ಕೊರೊನಾ ಎರಡನೇ ಅಲೆಯ ಆತಂಕಕ್ಕೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅರಮನೆ ನೋಡಲು 1 ಸಾವಿರ ಮಂದಿ ಬಂದರೆ ಅದೇ ಹೆಚ್ಚಾಗಿದೆ. ಪ್ರವಾಸಿಗರನ್ನೇ ನಂಬಿದ್ದ ಟೂರಿಸ್ಟ್ ಗೈಡ್ಗಳು ಹಾಗೂ ಟೂರಿಸ್ಟ್ ಫೋಟೋಗ್ರಾಫರ್ಗಳಿಗೆ ದೊಡ್ಡ ಹೊಡೆತ ಬಿದ್ದಿದೆ.